ADVERTISEMENT

ಶನಿವಾರ, 1-7-1967

​ಪ್ರಜಾವಾಣಿ ವಾರ್ತೆ
Published 30 ಜೂನ್ 2017, 19:30 IST
Last Updated 30 ಜೂನ್ 2017, 19:30 IST

* ಸರಕಾರದಿಂದಲೇ ಆಹಾರಧಾನ್ಯ ವಹಿವಾಟು ಅಸಾಧ್ಯ: ಜಗಜೀವನ ರಾಂ
ನವದೆಹಲಿ, ಜೂ. 30 –
ದೇಶದಲ್ಲಿ ಇಂದಿನ ಆಹಾರ ಧಾನ್ಯ ಉತ್ಪಾದನೆಯ ಸ್ಥಿತಿಯಲ್ಲಿ ಸರಕಾರವೇ ಪೂರ್ಣ ಪ್ರಮಾಣದಲ್ಲಿ ಆಹಾರ ಧಾನ್ಯಗಳ ಸಗಟು ಅಥವಾ ಚಿಲ್ಲರೆ ವ್ಯಾಪಾರ ನಡೆಸುವುದು ಸಾಧ್ಯವಿಲ್ಲ ಮತ್ತು ಅದರ ಅಗತ್ಯವೂ ಇಲ್ಲ ಎಂದು ಆಹಾರ ಖಾತೆ ಸಚಿವ ಜಗಜೀವನ ರಾಂ ತಿಳಿಸಿದರು.

ಲೋಕಸಭೆಗೆ ಇಂದು ಈ ಮಾಹಿತಿ ನೀಡಿದ ಅವರು, ‘ಆಹಾರ ನಿಗಮವನ್ನು ಆರಂಭಿಸುವ ಮೂಲಕ ಸರಕಾರ ಆಹಾರ ಧಾನ್ಯ ವಹಿವಾಟನ್ನು ಆರಂಭಿಸಿದೆ’ ಎಂದರು. ಆಹಾರ ನಿಗಮದ ಕೆಲವು ಅಧಿಕಾರಿಗಳ ವಿರುದ್ಧ ಸದಸ್ಯರು ಮಾಡಿರುವ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ ಸಚಿವರು ಭರವಸೆ ನೀಡಿದರು.

* ವಿ.ಎಸ್‌. ಕುಡ್ವ ನಿಧನ
ಮಂಗಳೂರು, ಜೂ.1–
ಖ್ಯಾತ ಉದ್ಯಮಿ ವಿ.ಎಸ್‌. ಕುಡ್ವ ಅವರು ಇಲ್ಲಿಗೆ ಸಮೀಪದ ಮರೋಳಿಯಲ್ಲಿ ಇಂದು ಮುಂಜಾನೆ ನಿಧನ ಹೊಂದಿದರು.
ಮುಂಜಾನೆ ಅವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು.

ADVERTISEMENT

* ಚೆಕ್‌ ಮೂಲಕ ವೇತನ ಪಾವತಿ
ರಾಜ್ಯದ ಖಾಸಗಿ ಪ್ರೌಢಶಾಲೆಗಳ ಸುಮಾರು 14 ಸಾವಿರ ಶಿಕ್ಷಕರು ಹಾಗೂ ಇತರ ಸಿಬ್ಬಂದಿ ಈ ತಿಂಗಳಿನಿಂದ ಚೆಕ್‌ ಮೂಲಕ ತಮ್ಮ ವೇತನ ಪಡೆಯಲಿದ್ದಾರೆ. ಜೂನ್‌ ತಿಂಗಳ ವೇತನವನ್ನು ಜುಲೈ 5ರೊಳಗೆ ಬ್ಯಾಂಕ್‌ ಅಥವಾ ಅಂಚೆ ಕಚೇರಿ ಗಳ ಮೂಲಕ ವಿತರಿಸಲಾಗುವುದು.

* ಹಾರಂಗಿ ಯೋಜನೆ ಬದಲಾವಣೆಗೆ ವಿರೋಧ
ಶುಕ್ರವಾರ ನಡೆದ ಬಜೆಟ್‌ ಕುರಿತ ಚರ್ಚೆಯ ವೇಳೆ ಇಬ್ಬರು ಶಾಸಕರು ಹಾರಂಗಿ ಯೋಜನೆಗೆ ಆಯ್ಕೆ ಮಾಡಿರುವ ಜಾಗದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊಡಗಿನ ಜನರಿಗೆ ಯಾವ ರೀತಿಯಲ್ಲೂ ಉಪಯೋಗವಿಲ್ಲದ ಹಾರಂಗಿ ಯೋಜನೆಯನ್ನು ಜಾರಿ ಮಾಡಲು ಮುಂದಾದರೆ ಜನರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಕೊಡಗು ಶಾಸಕ ಶ್ರೀ ಜಿ.ಎಂ. ಮಂಜುನಾಥಯ್ಯ ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.