ADVERTISEMENT

ಶನಿವಾರ, 2–12–1967

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2017, 19:30 IST
Last Updated 1 ಡಿಸೆಂಬರ್ 2017, 19:30 IST

ಕಾಂಗ್ರೆಸ್ ಅಧ್ಯಕ್ಷತೆಗೆ ಶ್ರೀ ನಿಜಲಿಂಗಪ್ಪ ಸರ್ವಾನುಮತದ ಆಯ್ಕೆ ಖಚಿತ: ಇಂದಿರಾ–ಕಾಮರಾಜ್ ಯತ್ನ ಸಫಲ‌
ನವದೆಹಲಿ, ಡಿ. 1– ಮೈಸೂರಿನ ಮುಖ್ಯಮಂತ್ರಿ ಶ್ರೀ ಸಿದ್ದವನಹಳ್ಳಿ ನಿಜಲಿಂಗಪ್ಪನವರು ಮುಂದಿನ ಕಾಂಗ್ರೆಸ್ ಅಧ್ಯಕ್ಷನಾಗಿ ಸರ್ವಾನುಮತದಿಂದಿ ಆಯ್ಕೆಯಾಗುವುದು ಖಚಿತ. ತಮ್ಮ ಉತ್ತರಾಧಿಕಾರಿಯಾಗಿ ಶ್ರೀ ನಿಜಲಿಂಗಪ್ಪನವರ ಆಯ್ಕೆಗೆ ತಾವು ಸಮ್ಮತಿಸಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ಕಾಮರಾಜ್ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದಾಗ ಈ ಸ್ಪಷ್ಟ ಸೂಚನೆ ಸಿಕ್ಕಿತು.

ಕರ್ನಾಕಕ್ಕೆ ಸಂದ ಗೌರವ
ಬೆಂಗಳೂರು, ಡಿ. 1– ‘ಕರ್ನಾಟಕಕ್ಕೆ ಸಂದ ಗೌರವ’ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಕಾಂಗ್ರೆಸ್ಸಿನ ನೂತನ ಅಧ್ಯಕ್ಷರಾಗುವರೆಂಬ ಸುದ್ದಿ ಖಚಿತವಾದ ನಂತರ ಪ್ರದೇಶ ಕಾಂಗ್ರೆಸ್ ವಲಯಗಳಲ್ಲಿ ಹಾಗೂ ಅನೇಕ ಸಾರ್ವಜನಿಕ ವಲಯಗಳಲ್ಲಿ ಈ ಪ್ರತಿಕ್ರಿಯೆಯನ್ನು ಸಂತೋಷದೊಡನೆ ವ್ಯಕ್ತಪಡಿಸಲಾಯಿತು. ಕರ್ನಾಟಕದ ನಾಯಕರೊಬ್ಬರು ಕಾಂಗ್ರೆಸ್ ಗದ್ದುಗೆಯನ್ನೇರುತ್ತಿರುವುದು ಕಾಂಗ್ರೆಸ್ ಇತಿಹಾಸದಲ್ಲೇ ಇದು ಪ್ರಥಮ.

ಇಂದಿರಾ ತಂತ್ರದಿಂದ ಕೆರಳಿದ ಕಾಮರಾಜ್
ನವದೆಹಲಿ, ಡಿ. 1– ಮುಂದಿನ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯ ತೆರೆಯಮರೆಯ ನಾಟಕದಲ್ಲಿ ಪ್ರಧಾನಿ ಶ್ರೀಮತಿ ಇಂದಿರಾಗಾಂಧಿ ಮತ್ತು ಅವರ ಸಲಹೆಗಾರರು ಅನುಸರಿಸಿದ ತಂತ್ರಗಳನ್ನು ಕೋಪೋದ್ರಿಕ್ತ ಶ್ರೀ ಕಾಮರಾಜ್ ಇಂದು ಉಗ್ರವಾಗಿ ಖಂಡಿಸಿದರು.

ADVERTISEMENT

ಮೈಸೂರಿನ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಕೊನೆಯ ಗಳಿಗೆಯಲ್ಲಿ ಶ್ರೀಮತಿ ಇಂದಿರಾಗಾಂಧಿ ಮತ್ತು ಶ್ರೀ ಕಾಮರಾಜರನ್ನೂ ಒಳಗೊಂಡು ಹೈಕಮಾಂಡ್ ಸರ್ವಾನುಮತದಿಂದ ಆರಿಸಿದೆ. ಆದರೆ, ಅದು ನಡೆದ ಕ್ರಮ ಶ್ರೀ ಕಾಮರಾಜರ ಕೋಪಾವೇಶಕ್ಕೆ, ಕಟು ಟೀಕೆಗೆ ಗುರಿಯಾಗಿದೆ.

ಐವರಿಂದ ನಾಮಪತ್ರ ಸಲ್ಲಿಕೆ
ನವದೆಹಲಿ, ಡಿ. 1 – ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ಇಂದು ಸಂಜೆಯವರೆಗೆ ಐದು ಮಂದಿ ಅಭ್ಯರ್ಥಿಗಳ ನಾಮಪತ್ರಗಳು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಾದಿಕ್ ಆಲಿಯವರ ಕೈಗೆ ತಲುಪಿದ್ದವು. ಎಲ್ಲ ನಾಮಪತ್ರಗಳೂ ಕ್ರಮಬದ್ಧವಾಗಿವೆ. ಸ್ಪರ್ಧಿಗಳು: ಸರ್ವಶ್ರೀ ಎಸ್. ನಿಜಲಿಂಗಪ್ಪ, ಎಸ್.ಕೆ. ಪಾಟೀಲ್, ಕೆ. ಹನುಮಂತಯ್ಯ, ಮೋಹನ್ ಧಾರಿಯ ಮತ್ತು ಜಿ.ಎಲ್. ನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.