ADVERTISEMENT

ಶನಿವಾರ, 23–9–1967

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಶನಿವಾರ, 23–9–1967
ಶನಿವಾರ, 23–9–1967   

ಪದವಿಗಿಂತ ಮಗಳು ಹೆಚ್ಚು

ವಾಷಿಂಗ್ಟನ್, ಸೆ. 21– ಸ್ಟೇಟ್ ಕಾರ್ಯದರ್ಶಿ ಡೀನ್‌‌ರಸ್ಕ್‌ರ ಪುತ್ರಿಯು ನಿನ್ನೆ ದಿನ ನೀಗ್ರೊ ವಿದ್ಯಾರ್ಥಿಯೊಬ್ಬನನ್ನು ವಿವಾಹವಾದ ಅಚ್ಚರಿಯ ವಾರ್ತೆಯ ಹಿನ್ನೆಲೆಯಲ್ಲಿ, ಈ ವಿವಾಹದಿಂದ ರಾಜಕೀಯ ಆಡಳಿತಕ್ಕೆ ಧಕ್ಕೆ ಉಂಟಾಗುವುದೆಂದು ಅಧ್ಯಕ್ಷ ಜಾನ್‌ಸನ್‌ರು ಭಾವಿಸುವುದಾದರೆ ತಮ್ಮ ಹುದ್ದೆಗೆ ರಾಜಿನಾಮೆ ನೀಡುವುದಾಗಿ ಡೀನ್‌‌ರಸ್ಕ್ ತಿಳಿಸಿದ್ದರೆಂದು ನಿನ್ನೆ ಇಲ್ಲಿ ಬಲವಾದ ವದಂತಿ ಎದ್ದಿದ್ದಿತು.

ಈ ವಿವಾಹಕ್ಕೆ ಲೇಶವಾದರೂ ವಿರೋಧ ವ್ಯಕ್ತಪಡಿಸದೆ ಇದ್ದ ಅಧ್ಯಕ್ಷ ಜಾನ್‌ಸನ್‌ರು ರಸ್ಕ್‌ರ ರಾಜಿನಾಮೆ ಸಲಹೆಯನ್ನು ತಳ್ಳಿ ಹಾಕಿದರೆಂದು ಹೇಳಲಾಗಿದೆ.

ADVERTISEMENT

18 ವರ್ಷದ ಮಾರ್ಗರೆಟ್ ಎಲಿಜಬೆತ್‌ಳನ್ನು ವಿವಾಹವಾದ ನೀಗ್ರೋ ವರ 22 ವರ್ಷದ ಗಯ್ ಗಿಬ್ಸನ್ ಸ್ಮಿತ್, ಜಾರ್ಜ್‌ಟೌನ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ. ಇವರಿಬ್ಬರ ವಿವಾಹ ನಡೆದದ್ದು ಸ್ವಾನ್ ಫರ್ಡ್ ವಿಶ್ವವಿದ್ಯಾಲಯದಲ್ಲಿ. ರಸ್ಕ್ ದಂಪತಿಗಳು ವಿವಾಹ ಸಮಾರಂಭದಲ್ಲಿ ಹಾಜರಿದ್ದರು. ಸಮಾರಂಭದಲ್ಲಿ ಹಾಜರಿದ್ದ ಬೇರೆ ನೀಗ್ರೋ ಜನರೆಂದರೆ ವರನ ತಾಯಿ, ತಂದೆಯರು ಮಾತ್ರ.

ಮಂಗಳೂರು ಬಂದರು ಪ್ರಮಾಣದ ಅಗತ್ಯ ಬಗ್ಗೆ ಕೇಂದ್ರಕ್ಕೆ ಮನವಿ

ಬೆಂಗಳೂರು, ಸೆ. 22– ವರ್ಷಕ್ಕೆ ನಲವತ್ತು ಲಕ್ಷ ಟನ್ ಸಾಗಾಣಿಕೆ ಸಾಧ್ಯವಾಗುವ ರೀತಿಯಲ್ಲಿ ಮಂಗಳೂರಿನಲ್ಲಿ ಬೃಹತ್ ಬಂದರನ್ನು ನಿರ್ಮಿಸುವ ಅಗತ್ಯದ ಬಗ್ಗೆ ಸಂಶಯ ಬಗೆಹರಿದು ಕೇಂದ್ರ ಸರಕಾರವು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಿದೆಯೆಂದು ತಿಳಿದು ಬಂದಿದೆ.

ರಾಜಸ್ತಾನದಲ್ಲಿ ಪ್ರವಾಹ ಹಾವಳಿ: ಹತ್ತು ಲಕ್ಷ ಜನರಿಗೆ ತೊಂದರೆ

ಜೈಪುರ, ಸೆ. 22– ಭರತಪುರದಲ್ಲಿ ಮತ್ತು ಪಾಳಿ, ಗಂಗನಾಗ್, ಆಳ್ವಾರ್ ಮತ್ತು ಜೈಪುರ ಜಿಲ್ಲೆಗಳ ಭಾಗಗಗಳಲ್ಲಿ 7–8 ಲಕ್ಷ ಎಕರೆ ಪ್ರದೇಶದಲ್ಲಿನ ಸುಮಾರು ಹತ್ತು ಲಕ್ಷ ಜನರು ಪ್ರವಾಹಗಳಿಂದ ತೊಂದರೆಗೀಡಾಗಿದ್ದಾರೆಂದು ಮುಖ್ಯಮಂತ್ರಿ ಶ್ರೀ ಮೋಹನ್ ಲಾಲ್ ಸುಖಾಡಿಯಾ ಅವರು ಈ ಸಂಜೆ ವರದಿಗಾರರಿಗೆ ತಿಳಿಸಿದರು.

ಅ. 15 ರಿಂದ ಪಾನ ನಿರೋಧ ರದ್ದು

ಬೆಂಗಳೂರು, ಸೆ. 22– ಬಿದರೆ ಜಿಲ್ಲೆ, ಬಿಜಾಪುರ ಜಿಲ್ಲೆಯ ಜಮಖಂಡಿ, ಮೈಸೂರು ಜಿಲ್ಲೆಯ ಚಾಮರಾಜನಗರ ಮತ್ತು ಯಳಂದೂರು, ಉತ್ತರ ಕನ್ನಡ ಜಿಲ್ಲೆಯ ಕುಮಟ, ಹೊನ್ನಾವರ ಮತ್ತು ಅಂಕೋಲಾ ತಾಲ್ಲೂಕುಗಳನ್ನು ಬಿಟ್ಟು ರಾಜ್ಯದ ಉಳಿದ ಭಾಗಗಳಲ್ಲಿ ಪಾನನಿರೋಧವನ್ನು ಅಕ್ಟೋಬರ್ 15 ರಿಂದ ರದ್ದುಗೊಳಿಸಲಾಗುವುದು.

ಅಕ್ಟೋಬರ್ 1 ರಿಂದ ರದ್ದುಗೊಳಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು.

ಕೆಲವು ಪೂರ್ವಭಾವಿ ಕ್ರಮಗಳು ಇನ್ನೂ ಮುಗಿದಿಲ್ಲವಾದ್ದರಿಂದ ಅಕ್ಟೋಬರ್ 15 ರಿಂದ ರದ್ದುಗೊಳಿಸಲು ಸರಕಾರ ತೀರ್ಮಾನಿಸಿದೆಯೆಂದು ಗೊತ್ತಾಗಿದೆ.

ಜಲ–ನೆಲ ಲಗ್ನವಾದರೆ...

ಬೆಂಗಳೂರು, ಸೆ. 22– ‘ಕೃಷಿ ಉತ್ಪಾದನೆಗೆ ಅಗತ್ಯವಾದ ನೆಲವುಂಟು, ನೀರುಂಟು. ಆದರೆ ಅವುಗಳ ಸಂಯೋಗ ಮಾಡಿ ಫಲ ಪಡೆಯಬೇಕೆಂಬ ಇಚ್ಛೆಯ ಕೊರತೆ ಇದೆ’

ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರು ಈ ರೀತಿ ಇಂದಿಲ್ಲಿ ಅಭಿಪ್ರಾಯಪಟ್ಟು, ಭೂಮಿ ಮತ್ತು ನೀರುಗಳ ‘ಮದುವೆ’ಗೆ ಕರೆಯಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.