ADVERTISEMENT

ಶನಿವಾರ, 7–1–1967

50 ವರ್ಷಗಳ ಹಿಂದೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2017, 19:30 IST
Last Updated 6 ಜನವರಿ 2017, 19:30 IST
ಪ್ರತಿಭಾವಂತರ ವಲಸೆಯ ಬಗ್ಗೆ ಪ್ರಧಾನಿಯ ವ್ಯಥೆ
ಮದ್ರಾಸ್‌, ಜ. 6– ದೇಶದಿಂದ ಪ್ರತಿಭಾವಂತರು ಹೊರಕ್ಕೆ ಹೋಗುತ್ತಿರುವುದು ತಮಗೆ ದುಃಖವನ್ನುಂಟುಮಾಡಿದೆಯೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ತಿಳಿಸಿದರು.
 
ವಿಜ್ಞಾನದ ಬಗೆಗೆ ಇರುವ ‘ಸಾಮಾಜಿಕ ಮನೋಭಾವನೆ’ಯೇ ಇದಕ್ಕೊಂದು ಕಾರಣವೆಂದೂ, ಈ ಬುದ್ಧಿಶಕ್ತಿಯು ಅತ್ಯಂತ ಹೆಚ್ಚಿನ ಬೆಲೆಯುಳ್ಳದ್ದೆಂದು ಜನತೆಯು ಮಾನ್ಯ ಮಾಡುವುದಕ್ಕೆ ಯುಕ್ತವಾದ ವಾತಾವರಣ ಸೃಷ್ಟಿಸಬೇಕೆಂದೂ ಶ್ರೀಮತಿ ಇಂದಿರಾ ಗಾಂಧಿಯವರು ಹೇಳಿದರು.
 
***
ಕಾಂಗ್ರೆಸ್ಸಿನಿಂದ ಚನ್ನಬಸಪ್ಪ, ಕೆ.ಎಫ್‌. ಪಾಟೀಲ್‌ ನಿರ್‍ಗಮನ
ಬೆಂಗಳೂರು, ಜ. 6– ಸುಮಾರು ಮೂವತ್ತು ವರ್ಷಗಳಿಂದಲೂ ಕಾಂಗ್ರೆಸ್‌ ಸಂಸ್ಥೆಯ ಬಾಂಧವ್ಯ ಇಟ್ಟುಕೊಂಡು ಬಂದಿದ್ದ ಮಾಜಿ ಸಚಿವ ಶ್ರೀ ಎಚ್‌.ಎಂ. ಚನ್ನಬಸಪ್ಪ ಹಾಗೂ ಮಾಜಿ ಸಚಿವ ಶ್ರೀ ಕೆ.ಎಫ್‌. ಪಾಟೀಲ್‌ ಅವರುಗಳು ಕಾಂಗ್ರೆಸ್‌ ಅನ್ನು ಬಿಡುವ ತಮ್ಮ ನಿರ್ಧಾರವನ್ನು ಇಂದು ಪ್ರಕಟಿಸಿದರು.
 
***
‘ಜೈ ಕಿಸಾನ್‌’ ವಿಶೇಷ ಅಂಚೆ ಚೀಟಿ: 11 ರಂದು ಬಿಡುಗಡೆ
ನವದೆಹಲಿ, ಜ. 6– ಶ್ರೀ ಲಾಲ್‌ ಬಹಾದುರ್‌ ಶಾಸ್ತ್ರಿ ಅವರ ಪ್ರಥಮ ಪುಣ್ಯ ತಿಥಿಯಾದ ಈ ತಿಂಗಳು 11 ರಂದು ಅಂಚೆ ಮತ್ತು ತಂತಿ ಇಲಾಖೆ 15 ಪೈಸೆಯ ‘ಜೈ ಕಿಸಾನ್‌’ ವಿಶೇಷ ಅಂಚೆ ಚೀಟಿಯನ್ನು ಹೊರಡಿಸಲಿದೆ. ‘ಜೈ ಜವಾನ್‌ ಜೈ ಕಿಸಾನ್‌’ ಎಂಬ ಘೋಷಣೆಯನ್ನು ನೀಡಿದ್ದವರು ದಿವಂಗತ ಶ್ರೀ ಲಾಲ್‌ ಬಹಾದುರ್‌ ಶಾಸ್ತ್ರಿ ಅವರು. ಕಳೆದ ಗಣರಾಜ್ಯೋತ್ಸವದಂದು ‘ಜೈ ಜವಾನ್‌’ ವಿಶೇಷ ಅಂಚೆ ಚೀಟಿಯನ್ನು ಅಂಚೆ ಮತ್ತು ತಂತಿ ಇಲಾಖೆಯು ಹೊರಡಿಸಿತ್ತು.
 
***
ಚತುರ್ಥ ಯೋಜನೆಯಲ್ಲಿ ಮಂಗಳೂರು ರೇವಿನ ಅಭಿವೃದ್ಧಿಗೆ 20 ಕೋಟಿ ರೂ.
ನವದೆಹಲಿ, ಜ. 6– ಚತುರ್ಥ ಯೋಜನೆಯ ಅವಧಿಯಲ್ಲಿ ಮಂಗಳೂರಿನ ಬಂದರು ಅಭಿವೃದ್ಧಿಗೆ 20 ಕೋಟಿ ರೂ.ಗಳ ವೆಚ್ಚವನ್ನು ನಿಗದಿ ಮಾಡಲಾಗಿದೆ.
 
ಭೂಮಿಯ ಸ್ವಾಧೀನ, ಕಟ್ಟಡಗಳು ಮತ್ತು ರಸ್ತೆಗಳು ಇತ್ಯಾದಿ ಬಾಬುಗಳಿಗಾಗಿ ಈ ಯೋಜನೆಗೆ ಈಗಾಗಲೇ ಐದು ಕೋಟಿ ರೂ ವೆಚ್ಚ ಮಾಡಲಾಗಿದ್ದು, ರೇವಿನ ನಿರ್‍ಮಾಣ ಏಪ್ರಿಲ್‌ ತಿಂಗಳಿನಲ್ಲಿ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.