ADVERTISEMENT

ಶನಿವಾರ, 9–9–1967

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2017, 19:30 IST
Last Updated 8 ಸೆಪ್ಟೆಂಬರ್ 2017, 19:30 IST

ನಾನಕ್ ಸಾಗರ ಜಲಾಶಯ ಒಡೆದು ಭಾರಿ ನಷ್ಟ: ಜನ–ಜಾನುವಾರು, ಬೆಳೆ ನಾಶ; ಪಿಲಿಬಿಟ್, ಷಹಾಜಹಾನ್‌ಪುರ ಪಟ್ಟಣಗಳಿಗೆ ಅಪಾಯ
ಬರೇಲಿ, ಸೆ. 8–
ನೈನಿಟಾಲ್ ಜಿಲ್ಲೆಯಲ್ಲಿರುವ ನಾನಕ್‌ಸಾಗರ ಅಣೆಯ ಏರಿಯು ಇಂದು ಮುಂಜಾನೆ ಒಡೆದುಹೋಗಿ, ಪಿಲಿಬಿಟ್ ಮತ್ತು ಷಹಾಜಹಾನ್‌ಪುರಗಳಿಗೆ ತೀವ್ರ ಅಪಾಯ ತಲೆದೋರಿದೆ.

ಅಣೆಕಟ್ಟಿನ ಗೋಡೆಯಲ್ಲಿ 500 ಅಡಿಗಳಷ್ಟು ಅಗಲವಾದ ಬಿರುಕು ಉಂಟಾಗಿದ್ದು ಇನ್ನಷ್ಟು ಅಗಲವಾಗುತ್ತಿದೆಯೆಂದು ಅಣೆಕಟ್ಟಿನಲ್ಲಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಜನರಿಗೆ ಮನೆಗಳ ಮೇಲ್ಚಾವಣಿಯೆ ಆಶ್ರಯ
ಬರೈಲಿ, ಸೆ. 8–
ನಾನಕ್ ಸಾಗರ ಜಲಾಶಯ ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿದೆ. ಪ್ರವಾಸದಿಂದಾಗಿ ಅಣೆಕಟ್ಟಿನ ನೀರು ರಭಸದಿಂದ ನುಗ್ಗುತ್ತಿರುವುದು ನಿಂತಿಲ್ಲ.

ADVERTISEMENT

ನೈನಿಟಾಲ್ ಜಿಲ್ಲೆಯಲ್ಲಿ ಪಿಲಿಬಿಟ್‌‌ನ ಉತ್ತರಕ್ಕೆ 25 ಮೈಲಿ ದೂರದಲ್ಲಿರುವ ಈ ಅಣೆಕಟ್ಟಿನ ದಂಡೆಗಳು ಇಂದು ಮುಂಜಾನೆ ಒಡೆದು ಹೋದವು. ಇದರಿಂದ ಷಹಾಜಹಾನ್‌ಪುರಕ್ಕೂ, ದಿಯೋಹ ಮತ್ತು ಖನೌಟ್ ನದಿಗಳ ತೀರಗಳಲ್ಲಿರುವ ಅನೇಕ ಗ್ರಾಮಗಳಿಗೂ ತೀವ್ರ ಬೆದರಿಕೆಯುಂಟಾಗಿದೆ.

ಸಣ್ಣ ಕಾರು ಯೋಜನೆ ಕೈ ಬಿಟ್ಟಿಲ್ಲ
ನವದೆಹಲಿ, ಸೆ. 8–
ಸಣ್ಣ ಕಾರು ತಯಾರಿಕೆಯ ಯೋಜನೆಯನ್ನು ಕೈ ಬಿಡುವ ಉದ್ದೇಶ ಸರ್ಕಾರಕ್ಕೆ ಇಲ್ಲವೆಂದೂ, ಪೂರ್ಣ ಹಾಗೂ ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ದೇಶೀಯ ಕಾರುಗಳ ಮಟ್ಟದ ಬಗ್ಗೆ ಪಾಂಡೆ ಸಮಿತಿಯ ವರದಿಗಾಗಿ ಅದು ಕಾಯುತ್ತಿದೆಯೆಂದು ಕೇಂದ್ರದ ಕೈಗಾರಿಕಾ ಅಭಿವೃದ್ಧಿ ಸಚಿವ ಫಕ್ರುದ್ದೀನ್ ಆಲಿ ಅಹ್ಮದ್ ಅವರು ವಿದರ್ಭ ಕೈಗಾರಿಕಾ ಸಂಘದ ಪರವಾಗಿ ಬಂದ ನಿಯೋಗವೊಂದಕ್ಕೆ ಆಶ್ವಾಸನೆ ಇತ್ತುದಾಗಿ ವರದಿಯಾಗಿದೆ.

ರಾಜಸ್ಥಾನದ ನಾಲ್ಕು ಜಿಲ್ಲೆಗಳಲ್ಲಿ ಲಕ್ಷಾಂತರ ಎಕರೆ ಪ್ರದೇಶ ನೀರಿನಲ್ಲಿ
ಜಯಪುರ, ಸೆ. 8–
ಭರತಪುರ ಜಿಲ್ಲೆಯಲ್ಲಿ ಫಸಲು ನಿಂತಿರುವ ಒಂದು ಲಕ್ಷ ಎಕರೆಗಳಿಗೂ ಹೆಚ್ಚು ಪ್ರದೇಶವನ್ನೊಳಗೊಂಡು ನಾಲ್ಕು ಲಕ್ಷ ಎಕರೆ ವಿಸ್ತೀರ್ಣವಾದ ಪ್ರದೇಶವು ಪ್ರವಾಹಕ್ಕೆ ಸಿಕ್ಕಿರುವುದಾಗಿ ಮೊದಲ ಅಂದಾಜುಗಳು ತಿಳಿಸಿವೆ. ನಾಲ್ಕೈದು ಸಾವಿರ ಕಚ್ಚಾ ಮನೆಗಳಿಗೆ ಪ್ರವಾಹದಿಂದ ಜಖಂ ಆಗಿದೆ.

ಎರಡರಷ್ಟು ಶುಲ್ಕ ವಿಧಿಗೆ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳಿಗೆ ಅವಕಾಶ
ಬೆಂಗಳೂರು, ಸೆ. 8–
ಸರಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿಧಿಸಲಾಗುವ ಶಿಕ್ಷಣ ಶುಲ್ಕದ ಎರಡರಷ್ಟನ್ನು ವಸೂಲು ಮಾಡಲು  ಸರಕಾರದಿಂದ ಸಹಾಯ ಪಡೆಯುವ ಎಂಜಿನಿಯರಿಂಗ್ ಕಾಲೇಜುಗಳ ಆಡಳಿತ ವರ್ಗಗಳಿಗೆ ಅನುಮತಿ ನೀಡಬೇಕೆಂದು ಸರಕಾರ ಆದೇಶ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.