ADVERTISEMENT

ಶುಕ್ರವಾರ, 17–3–1967

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2017, 19:30 IST
Last Updated 16 ಮಾರ್ಚ್ 2017, 19:30 IST

ಇಂದಿರಾ ಸಂಪುಟದ ವಿರುದ್ಧ ಮುಂದಿನ ವಾರ ಅವಿಶ್ವಾಸ ನಿರ್ಣಯ ಮಂಡನೆ ಸಂಭವ
ನವದೆಹಲಿ, ಮಾ. 16–
ಶ್ರೀಮತಿ ಇಂದಿರಾ ಗಾಂಧಿ ಅವರ ನೂತನ ಸರ್ಕಾರವು ಮುಂದಿನ ವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸಬೇಕಾಗಿ ಬರುವ ಸಂಭವವಿದೆ.

ರಾಜಸ್ತಾನ ವಿಧಾನಸಭೆಯಲ್ಲಿ ತನಗೆ ಬಹುಮತವಿದೆಯೆಂದು ಹೇಳಿಕೊಳ್ಳುವ ವಿರೋಧಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ಕೊಡದೆ ರಾಷ್ಟ್ರಪತಿಗಳ ಆಡಳಿತ ಜಾರಿಗೆ ತಂದಿರುವುದನ್ನು ಖಂಡಿಸುವ ನಿರ್ಣಯವೊಂದನ್ನು ಜನಸಂಘವು ತರಲಿದೆ.

ಇಂದಿರಾಗೆ ಸ್ವಲ್ಪ ಅಸ್ವಸ್ಥತೆ
ನವದೆಹಲಿ, ಮಾ. 16–
ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿ ಅವರಿಗೆ ಸ್ವಲ್ಪ ಅಸ್ವಸ್ಥತೆಯುಂಟಾಗಿದೆ. ಆದಕಾರಣ ಅವರ ಕೆಲವು ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಯಿತು.

ಭುವನೇಶ್ವರದ ಸಭೆಯೊಂದರಲ್ಲಿ ಕಲ್ಲೆಸೆತದಿಂದ ಅಲ್ಲಾಡತೊಡಗಿದ ಅವರ ಹಲ್ಲೊಂದು ಸ್ವಲ್ಪ ಬಾಧೆ ಕೊಡುತ್ತಿದೆಯೆಂದು ಹೇಳಲಾಗಿದೆ. ಈ ಅಸ್ವಸ್ಥತೆಯ ಕಾರಣ ಶ್ರೀಮತಿ ಗಾಂಧಿ ಅವರು ಇಂದು ಸಂಜೆ ನಡೆದ ಕಾಂಗ್ರೆಸ್‌ ಪಾರ್‍ಲಿಮೆಂಟರಿ ಪಕ್ಷದ ಸಭೆಯ ಅಧ್ಯಕ್ಷತೆ ವಹಿಸಲಿಲ್ಲ. ಆನಂತರ ನಡೆಯಲು ಏರ್ಪಾಡಾಗಿದ್ದ ಕೇಂದ್ರ ಸಂಪುಟ ಸಭೆ ರದ್ದುಗೊಳಿಸಲಾಯಿತು.

ರಾಜ್ಯಸಭೆ ಪಿ.ಎಸ್‌.ಪಿ. ನಾಯಕರಾಗಿ ಮುಲ್ಕಾ
ದೆಹಲಿ, ಮಾ. 16–
ಲೋಕಸಭೆಯಲ್ಲಿ ಪ್ರಜಾ ಸೋಷಲಿಸ್ಟ್‌ ಪಕ್ಷದ ನಾಯಕರಾಗಿ ಶ್ರೀ ಸುರೇಂದ್ರನಾಥ್‌ ದ್ವಿವೇದಿಯವರೂ ರಾಜ್ಯಸಭೆಯಲ್ಲಿ ಪಿ.ಎಸ್‌.ಪಿ. ನಾಯಕರಾಗಿ ಶ್ರೀ ಮುಲ್ಕಾ ಗೋವಿಂದರೆಡ್ಡಿಯವರೂ ಆಯ್ಕೆಯಾಗಿದ್ದಾರೆ.

ಪಂಜಾಬ್‌ ರಾಜ್ಯದಲ್ಲಿ ಪಾನನಿರೋಧ ರದ್ದು
ಚಂಡೀಘಡ,  ಮಾ. 16–
ರೊಹ್ಟಕ್‌ ಜಿಲ್ಲೆಯಲ್ಲಿ ಪಾನನಿರೋಧವನ್ನು ರದ್ದುಗೊಳಿಸಲು ಹರಿಯಾನ ಸರ್ಕಾರ ನಿರ್ಧರಿಸಿದೆಯೆಂದು ರಾಜ್ಯದ ಹಣಕಾಸಿನ ಸಚಿವರು ಇಂದು ಇಲ್ಲಿ ಪ್ರಕಟಿಸಿದರು.

ರೊಹ್ಟಕ್‌ ಜಿಲ್ಲೆಯಲ್ಲಿ ಹದಿನಾರು ವರ್ಷಗಳ ಹಿಂದೆ ಪಾನನಿರೋಧವನ್ನು ಜಾರಿಗೆ ತರಲಾಯಿತು. ರಾಜ್ಯದ ಉಳಿದ ಆರು ಜಿಲ್ಲೆಗಳಲ್ಲಿ ಪಾನನಿರೋಧವಿಲ್ಲ. ಪಾನನಿರೋಧದ ರದ್ದಿನಿಂದ ರಾಜ್ಯಕ್ಕೆ ವರ್ಷ ಒಂದಕ್ಕೆ 70 ಲಕ್ಷ ರೂಪಾಯಿಗಳ ಹೆಚ್ಚಿನ ವರಮಾನ ಬರುತ್ತದೆಂದು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.