ADVERTISEMENT

ಶುಕ್ರವಾರ, 19–5–1967

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST

ನಗರದಲ್ಲಿ ವೆಂಕಟಪ್ಪ ರಾಷ್ಟ್ರೀಯ ಕಲಾಭವನ ನಿರ್ಮಿಸಲು ಯೋಚನೆ
ಬೆಂಗಳೂರು, ಮೇ 18–
ಮೈಸೂರಿನ ಸುಪ್ರಸಿದ್ಧ ಕಲಾವಿದ ಶ್ರೀ ವೆಂಕಟಪ್ಪನವರ ನಾಮಾಂಕಿತದಲ್ಲಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಕಲಾಭವನವೊಂದನ್ನು ನಿರ್ಮಿಸಲು ರಾಜ್ಯ ಸರ್ಕಾರ ಆಸಕ್ತಿ ವಹಿಸಿರುವುದಾಗಿ ಕಾನೂನು ಮಂತ್ರಿ ಶ್ರೀ ಎಸ್.ಆರ್. ಕಂಠಿ ಅವರು ಇಂದು ಇಲ್ಲಿ ಪ್ರಕಟಿಸಿದರು.

ಈ ಸಮಿತಿಯ ಅಧ್ಯಕ್ಷರಾಗಿರಲು ರಾಜ್ಯದ ಮಾಜಿ ರಾಜ್ಯಪಾಲ ಮತ್ತು ಭಾರತದ ಉಪರಾಷ್ಟ್ರಪತಿ ಶ್ರೀ ಗಿರಿ ಅವರೂ, ಉಪಾಧ್ಯಕ್ಷರಾಗಿರಲು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪನವರೂ ಸಮ್ಮತಿಸಿರುವುದಾಗಿ ಅವರು ತಿಳಿಸಿದರು. ರಾಜ್ಯದ ಸಚಿವರು, ಕಲಾಭಿಮಾನಿಗಳು ಹಾಗೂ ಖ್ಯಾತ ಕಲಾವಿದರು ಸಮಿತಿ ಸದಸ್ಯರಾಗಿರುವುದಾಗಿ ಅವರು ಹೇಳಿದರು.

ಈಜಿಪ್ಟ್, ಗಾಜಾದಿಂದ ವಿಶ್ವಸೇನೆ ವಾಪಸಾಗಲಿ
ವಿಶ್ವಸಂಸ್ಥೆ, ಮೇ 18–
ವಿಶ್ವಸಂಸ್ಥೆಯ ತುರ್ತು ಸೇನೆಯನ್ನು ಅರಬ್ ಗಣರಾಜ್ಯ  ಪ್ರದೇಶ ಹಾಗೂ ಗಾಜಾದಿಂದ ಪೂರ್ಣವಾಗಿ ಹಿಂತೆಗೆದುಕೊಳ್ಳಬೇಕೆಂದು ಸಂಯುಕ್ತ ಅರಬ್ ಗಣರಾಜ್ಯವು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉ ಥಾಂಟ್ ಅವರಿಗೆ ಇಂದು ಔಪಚಾರಿಕವಾಗಿ ಮನವಿ ಮಾಡಿಕೊಂಡಿತು.

ADVERTISEMENT

‘ಅತಿ ಶೀಘ್ರವಾಗಿ’ ಈ ಹಿಂತೆಗೆದುಕೊಳ್ಳುವ ಕ್ರಮವನ್ನು ಜಾರಿಗೆ ತರಬೇಕೆಂದು ಅರಬ್ ಗಣರಾಜ್ಯದ ವಿದೇಶ ಸಚಿವ ರಾಯಿದ್ ಅವರಿತ್ತ ಸಂದೇಶವನ್ನು ರಾಯಭಾರಿ ಎಲ್. ಕೋನಿ ಇಂದು ಉ ಥಾಂಟ್ ಅವರಿಗೆ ಸಲ್ಲಿಸಿದರು.

ಬಂಗಾಳದಲ್ಲಿ ಹಸಿವಿನಿಂದ ಹಲವು ಸಾವು
ಮದರಾಸು, ಮೇ 18–
ಪಶ್ಚಿಮ ಬಂಗಾಳದ ಫುರುಲಿಯ ಮತ್ತು ಬಂಕುರಾ ಜಿಲ್ಲೆಗಳಲ್ಲಿ ಹಸಿವಿನಿಂದ ಸಾವು ಸಂಭವಿಸಿದ ವರದಿ ಬಂದಿದೆಯೆಂದು  ಪಶ್ಚಿಮ ಬಂಗಾಳದ ಪರಿಹಾರ ಮತ್ತು ಸಹಕಾರ ಖಾತೆ ಸಚಿವ ಶ್ರೀ ಎನ್. ನಿಶಿತನಾಥ್ ಕುಂದು ಅವರು  ಇಂದು ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

ಈ ಜಿಲ್ಲೆಗಳಲ್ಲಿ ಇತ್ತೀಚೆಗೆ ಪ್ರವಾಸ ಮಾಡಿದ ಲೋಕಸೇವಾ ಪಕ್ಷದ ನಾಯಕರು ತಮಗೆ ಈ ಸುದ್ದಿಯನ್ನು ತಿಳಿಸಿದರೆಂದು ಹೇಳಿದ ಪಶ್ಚಿಮ ಬಂಗಾಳದ ಸಚಿವರು ‘ಹಸಿವಿನಿಂದ ಎಷ್ಟು ಸಾವು ಸಂಭವಿಸಿದೆಯೆಂಬ ಬಗ್ಗೆ ವಿವರ ದೊರೆತಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.