ADVERTISEMENT

ಶುಕ್ರವಾರ, 31–3–1967

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2017, 20:59 IST
Last Updated 30 ಮಾರ್ಚ್ 2017, 20:59 IST

ವೀರ–ವೈರಾಗ್ಯಗಳ ಮೂರ್ತಿಮಂತ ಸ್ವಾಮಿ ಬಾಹುಬಲಿಗೆ ಮಹಾಮಜ್ಜನ ಶಾಂತಿ, ತುಷ್ಟಿ, ಪುಷ್ಟಿಗಳಿಗಾಗಿ ಧನಕನಕ ಅಮೃತಾಭಿಷೇಕ: ಭಕ್ತಕೋಟಿಯ ಅನನ್ಯ ಶ್ರದ್ಧಾರ್ಪಣೆ

ಶ್ರವಣಬೆಳಗೊಳ, ಮಾ. 30–  ಮೇಲೆ ಮುಗಿಲಲ್ಲಿ ದೇವದೇವತೆಗಳ ಅಗೋಚರ ಸಮ್ಮಿಲನ, ಕೆಳಗೆ ಶಿರವೆತ್ತಿ, ಕೈಮುಗಿದು, ಭಕ್ತಿಘೋಷ ಮೊಳಗಿಸುವ ಭಕ್ತ ಕೋಟಿ. ವಿಂಧ್ಯಗಿರಿಯ ವೀರ–ವೈರಾಗ್ಯಗಳ ಮಹಾಪ್ರಭು ಬಾಹುಬಲಿ ಸ್ವಾಮಿಗೆ ಇಂದು ಮಹಾ ಮಸ್ತಕ ಅಭಿಷೇಕ. ಅಪರೂಪಕ್ಕೊಮ್ಮೆ ಒದಗಿ ಬರುವ ಪಾವನ ಪರ್ವ. ಮಾನವನನ್ನು ಮೇಲೆತ್ತುವ ಅಪೂರ್ವ ಉತ್ಸವ.

ಅದೆಷ್ಟು ತಿಂಗಳುಗಳ ಸಿದ್ಧತೆ, ಅದೆಷ್ಟು ಸಾವಿರ ಜನರ ಶ್ರಮ, ಅದೆಷ್ಟು ಲಕ್ಷ ಜನರ ಭಕ್ತಿ ಶ್ರದ್ಧೆಯ ಅರ್ಪಣೆ. ಹದಿನಾಲ್ಕು ವರ್ಷಗಳಿಂದ ಈ ಮುಹೂರ್ತಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಮಹಾವೀರ ಭಕ್ತರ ಕಣ್ಣುಗಳಲ್ಲಿ ಆನಂದಾಶ್ರು ಉಕ್ಕಿತು.

ADVERTISEMENT

ಏಳೂವರೆ ಗಂಟೆಯ ಹೊತ್ತಿನ ಶುಭ ಮುಹೂರ್ತದಲ್ಲಿ ಪ್ರಥಮ ಕಲಶದ ನೀರು ಬಾಹುಬಲಿಯ ಮಸ್ತಕಕ್ಕೆ ಬಿದ್ದಾಗ, ರಾಜಾಂಗಣದ ಸುತ್ತಲೂ ಕುಳಿತು ಅದ್ಭುತದ ಆರಂಭಕ್ಕೆ ಕಾಯುತ್ತಿದ್ದ ಐದು ಸಾವಿರ ಜನರು ಹುಚ್ಚೆದ್ದು ಕುಣಿದರು. ಅರ್ಧ ಮೈಲು ದೂರದ ಚಂದ್ರಗಿರಿಯ ಕಲ್ಲುಬಂಡೆಗಳ ಮೇಲೆ ಕುಳಿತು ಕಾಣದಿದ್ದರೂ, ಕಂಡೇವೆಂಬ ಭಕ್ತಿ ಭ್ರಮೆಯಿಂದ ಕಾಯುತ್ತಿದ್ದ ಲಕ್ಷಾಂತರ ಜನರ ಜಯಘೋಷ. ‘ಜೈ ಬೋಲೋ ಬಾಹುಬಲಿ ಮಹಾರಾಜ್‌ ಕೀ ಜೈ’. ಅದು ಅವರ ಗಳಿಗೆ ಎಲ್ಲರ ಗಳಿಗೆ.  ಜಗತ್ತಿಗೇ ಮಹಾಗಳಿಗೆ.

***

ಎಚ್‌.ಎಂ.ಟಿ. ಗಡಿಯಾರಗಳಿಗೆ ಬೇಡಿಕೆ

ನವದೆಹಲಿ, ಮಾ. 30– ಬೆಂಗಳೂರಿನ ಹಿಂದೂಸ್ತಾನ್‌ ಮೆಷಿನ್‌ ಟೂಲ್ಸ್‌ ಕಾರ್ಖಾನೆಯು ವರ್ಷಂಪ್ರತಿ 2,40,000 ಗಡಿಯಾರಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. ಆದರೆ ಪ್ರತಿವರ್ಷ ಹತ್ತು ಲಕ್ಷ ಎಚ್‌.ಎಂ.ಟಿ. ಗಡಿಯಾರಗಳಿಗೆ ಬೇಡಿಕೆ ಇದೆ. 1965–66 ರಲ್ಲಿ 1680 ಎಚ್.ಎಂ.ಟಿ. ಗಡಿಯಾರಗಳನ್ನು ಬ್ರಿಟನ್‌, ಅಮೆರಿಕ ಮತ್ತು ಕೆನಡಗಳಿಗೆ ರಫ್ತು ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.