ADVERTISEMENT

ಶುಕ್ರವಾರ, 5–5–1967

​ಪ್ರಜಾವಾಣಿ ವಾರ್ತೆ
Published 4 ಮೇ 2017, 19:30 IST
Last Updated 4 ಮೇ 2017, 19:30 IST
ಕಾಳಿ ಯೋಜನೆಗೆ ಶೀಘ್ರದಲ್ಲೇ ಕೇಂದ್ರದ ಅನುಮತಿ
ಬೆಂಗಳೂರು, ಮೇ 4– ಕಾಳಿನದಿ ವಿದ್ಯುತ್‌ ಯೋಜನೆಯನ್ನು ಕೈಗೊಳ್ಳಲು ಕೇಂದ್ರ ಸರಕಾರದ ಅನುಮತಿ ಅತಿ ಶೀಘ್ರದಲ್ಲಿಯೇ ದೊರಕುವುದೆಂಬ ವಿಶ್ವಾಸವನ್ನು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲರು ಇಂದು ವ್ಯಕ್ತಪಡಿಸಿದರು.
 
‘ನಾಲ್ಕನೇ ಯೋಜನೆ ಅವಧಿಯಲ್ಲಿ ಕಾಳಿನದಿ ಯೋಜನೆ ಕಾರ್ಯ ಆರಂಭವಾಗುವುದೆಂಬ ಪೂರ್ಣ ಭರವಸೆ  ನಮಗಿದೆ’ ಎಂದರು.

ಗಡಿ ಆಯೋಗದ ಮುಂದೆ ವಾದ ಮಹಾರಾಷ್ಟ್ರದ ನಾಲ್ಕು ತಾಲ್ಲೂಕುಗಳು ತನಗೆ ಸೇರಿದ್ದೆಂದು ರಾಜ್ಯದ ನಿಲುವು
ನವದೆಹಲಿ, ಮೇ 4–  ಮಹಾರಾಷ್ಟ್ರದಿಂದ 350 ಗ್ರಾಮಗಳನ್ನೊಳಗೊಂಡ ನಾಲ್ಕು ತಾಲ್ಲೂಕುಗಳು ತನಗೆ ಬರಬೇಕೆಂದು ಮೈಸೂರು ಸರ್ಕಾರವು, ಮಹಾರಾಷ್ಟ್ರ- ಮೈಸೂರು ಗಡಿ ವಿವಾದದ ಬಗ್ಗೆ ಪರಿಶೀಲನೆ ನಡೆಸುತ್ತಿರುವ ಮಹಾಜನ್‌ ಆಯೋಗದ ಮುಂದೆ ತಿಳಿಸಿರುವುದಾಗಿ ಮೈಸೂರಿನ ಗಡಿ ಸಲಹಾ ಸಮಿತಿ ವಕ್ತಾರರು ಇಂದು ಇಲ್ಲಿ ನುಡಿದರು.
 
ಮಹಾರಾಷ್ಟ್ರದಲ್ಲಿರುವ ಸೊಲ್ಲಾಪುರ ನಗರವು ಸೇರಿ ಸೊಲ್ಲಾಪುರ, ಅಕ್ಕಲಕೋಟೆ, ಜತ್‌ ಮತ್ತು ಚಾಂದ್‌ಗಡ ಇವೇ ಈ ನಾಲ್ಕು ತಾಲ್ಲೂಕುಗಳು.
 
ಕಲ್ಕತ್ತದಲ್ಲಿ ಅನೇಕ ಪೋಲೀಸರ ಬಂಧನ
ಕಲ್ಕತ್ತ, ಮೇ 4– ನಗರದಲ್ಲಿ ಅನೇಕ ಮೋಸದ ಹಾಗೂ ವಂಚನೆಯ ಪ್ರಕರಣಗಳಿಗೆ ಕಾರಣರೆಂಬ ಆಪಾದನೆಯ ಮೇಲೆ ಇಂದು ಅನೇಕ ಪೋಲೀಸರನ್ನು ಬಂಧಿಸಲಾಯಿತು.
 
ವಿದೇಶ ಪ್ರಯಾಣದ ಮೇಲಿನ ನಿರ್ಬಂಧಗಳ ರದ್ದಿಗೆ ಶಿಫಾರಸು
ನವದೆಹಲಿ, ಮೇ 4– ವಿದೇಶ ಪ್ರಯಾಣದ ಮೇಲೆ ಈಗ ವಿಧಿಸಲಾಗಿರುವ ನಿರ್ಬಂಧಗಳನ್ನು ರದ್ದುಗೊಳಿಸಬೇಕೆಂದು (‘ಪಿ’ ಫಾರಂ ಅನ್ನು ರದ್ದುಗೊಳಿಸುವುದು) ಆಡಳಿತ ಸುಧಾರಣೆ ಆಯೋಗದ ಆರ್ಥಿಕ ಆಡಳಿತ ಅಧ್ಯಯನ ತಂಡವು ಶಿಫಾರಸು ಮಾಡಿದೆ.
 
ಜಾರಿಗೆ ತಂದಾಗ ಹೊಂದಿದ್ದ ಉದ್ದೇಶಗಳನ್ನು ಈಡೇರಿಸಲು ಈ ನಿರ್ಬಂಧಗಳು ವಿಫಲಗೊಂಡಿವೆಯೆಂದು ತಂಡವು ತಿಳಿಸಿದೆ.
 
ಸಭೆಯ ಕಲಾಪಕ್ಕೆ ವಿಘ್ನ ಜನತಂತ್ರಕ್ಕೆ ಪ್ರಹಾರ: ಸಭಾಧ್ಯಕ್ಷರ ಹೇಳಿಕೆ
ಬೆಂಗಳೂರು, ಮೇ, 4– ಬೇರೊಬ್ಬ ಸದಸ್ಯರ ಕಲಾಪಕ್ಕೆ ವಿಘ್ನ ತಂದೊಡ್ಡಿದರೆ ಅದರ ಜವಾಬ್ದಾರಿ ತಡೆಉಂಟುಮಾಡುವವರ ಮೇಲೆ ಬೀಳುವುದೆಂದು ವಿಧಾನಸಭೆಯಲ್ಲಿ ಅಧ್ಯಕ್ಷ ಶ್ರೀ ಬಿ.ವಿ. ಬಾಳಿಗಾ ಅವರು ಇಂದು ತೀವ್ರವಾಗಿ ಎಚ್ಚರಿಸಿದರು.
 
ಸದಸ್ಯರ ಹಕ್ಕಿನ ರಕ್ಷಣೆಯ ಜವಾಬ್ದಾರಿ ತಮ್ಮ ಮೇಲಿರುವುದರಿಂದ ಇಂದೂ ಕಲಾಪ ನಡೆಯಲು ತಡೆಯುಂಟಾದಲ್ಲಿ ಪರಿಸ್ಥಿತಿಯನ್ನು ಹೇಗೆ ಎದುರಿಸಬೇಕು ಎಂದು ಯೋಚಿಸಬೇಕಾಗುವುದೆಂದು ಅವರು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.