ADVERTISEMENT

ಸೋಮವಾರ 04 ಡಿಸೆಂಬರ್, 1967

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 19:30 IST
Last Updated 3 ಡಿಸೆಂಬರ್ 2017, 19:30 IST
ಸೋಮವಾರ 04 ಡಿಸೆಂಬರ್, 1967
ಸೋಮವಾರ 04 ಡಿಸೆಂಬರ್, 1967   

ಮಹಾಜನ್‌ ವರದಿ ಅನ್ವಯಕ್ಕೆ ನಗರದ ಸಭೆಯಲ್ಲಿ ಕರೆ

ಬೆಂಗಳೂರು, ಡಿ. 3– ಮಹಾರಾಷ್ಟ್ರ–ಮೈಸೂರು– ಕೇರಳ ಗಡಿವಿವಾದದ ಬಗ್ಗೆ ನೇಮಕವಾಗಿದ್ದ ಮಹಾಜನ್‌ ಆಯೋಗವು ಸಲ್ಲಿಸಿರುವ ವರದಿಯನ್ನು ಯಾವ ಮಾರ್ಪಾಟುಗಳೂ ಇಲ್ಲದೆ ಕಾರ್ಯಗತಗೊಳಿಸಲು, ಸಾರ್ವಜನಿಕ ಸಭೆಯೊಂದು ಇಂದು ಇಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿತು.

ಗವೀಪುರ ಗುಟ್ಟಹಳ್ಳಿಯ (ಸಮೀರಪುರ) ಕನ್ನಡ ಸಾಹಿತ್ಯ ಕುಟೀರವು ಸಂಸ್ಕೃತ ಕಾಲೇಜಿನಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆಯನ್ನು ಗಡಿಸಮಿತಿ ಅಧ್ಯಕ್ಷ ಶ್ರೀ ಎಸ್‌.ಎಸ್‌. ಮಳಿಮಠ್‌ ಅವರು ವಹಿಸಿದ್ದರು.

ADVERTISEMENT

**

ಮೈಸೂರು–ಮಹಾರಾಷ್ಟ್ರದಲ್ಲಿ ಕ್ರಾಂತಿಯಾಗಲಿ, ಕಾಂಗ್ರೆಸ್‌ ಅಳಿಯಲಿ: ಜೋಷಿ

ಕೊಲ್ಲಾಪುರ, ಡಿ. 3– ಮಹಾರಾಷ್ಟ್ರ ಮತ್ತು ಮೈಸೂರುಗಳಲ್ಲಿನ ಕಾಂಗ್ರೆಸ್‌ ಆಡಳಿತವನ್ನು ಮಾನ್ಯ ಮಾಡಬಾರದೆಂದು ಆ ರಾಜ್ಯಗಳ ಜನತೆಗೆ ಎಸ್‌.ಎಸ್‌.ಪಿ. ಅಧ್ಯಕ್ಷ ಶ್ರೀ ಎಸ್.ಎಂ. ಜೋಷಿ ಇಂದು ಕರೆಯಿತ್ತರು.

ಮಹಾರಾಷ್ಟ್ರ ಬಂದ್‌ಗೆ ಸಂಬಂಧಿಸಿದ ನಿರ್ಣಯವೊಂದರ ಬಗ್ಗೆ ಇಲ್ಲಿನ ಗಡಿ ಸಮಸ್ಯೆ ಸದನದಲ್ಲಿ ಮಾತನಾಡುತ್ತಿದ್ದ ಅವರು ನ್ಯಾಯವಾದ ಸೂತ್ರದ ಆಧಾರದ ಮೇಲೆ ಮೈಸೂರು– ಮಹಾರಾಷ್ಟ್ರ ಗಡಿ ವಿವಾದವನ್ನು ಪರಿಹರಿಸಬೇಕಾದುದು ಅತ್ಯಗತ್ಯ ಎಂದರು.

ಮೈಸೂರು ಮತ್ತು ಮಹಾರಾಷ್ಟ್ರಗಳಲ್ಲಿನ ಕಾಂಗ್ರೆಸ್‌ ಸರ್ಕಾರಗಳನ್ನು ಉರುಳಿಸಲು ಜನರಿಗೆ ಕರೆಯಿತ್ತ ಅವರು, ಕಾಂಗ್ರೆಸ್‌ ನಿರ್ಮೂಲವಾಗದಿದ್ದರೆ ದೇಶದಲ್ಲಿನ ಯಾವ ಸಮಸ್ಯೆಯೂ ಇತ್ಯರ್ಥವಾಗುವುದಿಲ್ಲ ಎಂದರು.

ಪ್ರಥಮ ಬದಲಿ ಹೃದಯ

ಕೇಪ್‌ಟೌನ್‌, ಡಿ. 3– ನಿನ್ನೆ ರಾತ್ರಿ ಕಾರ್‌ ಅಪಘಾತದಲ್ಲಿ ಸತ್ತ 24 ವರ್ಷ ವಯಸ್ಸಿನ ಯುವತಿಯ ಹೃದಯವನ್ನು ತೆಗೆದು 56 ವರ್ಷ ವಯಸ್ಸಿನ ಪುರುಷನೊಬ್ಬನಿಗೆ ದಕ್ಷಿಣ ಆಫ್ರಿಕದ ಶಸ್ತ್ರ ವೈದ್ಯರ ತಂಡವೊಂದು ಇಂದು ಯಶಸ್ವಿಯಾಗಿ ಅಳವಡಿಸಿತು.

ಒಬ್ಬರ ಹೃದಯವನ್ನು ಇನ್ನೊಬ್ಬರಿಗೆ ಯಶಸ್ವಿಯಾಗಿ ಅಳವಡಿಸುವ ಅತ್ಯಂತ ಮಹತ್ವದ ಶಸ್ತ್ರಚಿಕಿತ್ಸೆ ನಡೆದುದು ವಿಶ್ವದಲ್ಲಿ ಇದೇ ಮೊದಲನೆಯ ಬಾರಿ.

ಹೃದಯ ಅಳವಡಿಸಿಕೊಂಡ ವ್ಯಕ್ತಿಯ ಹೆಸರು ವಾಸ್ಕನ್‌ಸ್ಕಿ. ಅದಕ್ಕಾಗಿ ರಾತ್ರಿ 1 ರಿಂದ ಬೆಳಿಗ್ಗೆ 6 ರವರೆಗೆ ಶಸ್ತ್ರಕ್ರಿಯೆ. ಹೃದಯ ತೀವ್ರವಾಗಿ ಕೆಟ್ಟು, ಅದು ಸರಿಯಾಗಿ ಕೆಲಸ ಮಾಡದಿದ್ದುದರಿಂದ ಒಂದು ತಿಂಗಳ ಹಿಂದೆ ಅವನು ಆಸ್ಪತ್ರೆಗೆ ಸೇರಿದ್ದ.

ಹೊಂದಿಕೆಯಾಗುವಂತಹ ಹೃದಯವೊಂದು ಸಿಕ್ಕಲಿ ಎಂದು ವೈದ್ಯರು ಕಳೆದ ನಾಲ್ಕು ವಾರಗಳಿಂದಲೂ ಕಾದಿದ್ದರು. ಅವರ ನಿರೀಕ್ಷೆ ನಿನ್ನೆ ಕೈಗೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.