ADVERTISEMENT

ಸೋಮವಾರ, 12–6–1967

​ಪ್ರಜಾವಾಣಿ ವಾರ್ತೆ
Published 11 ಜೂನ್ 2017, 19:30 IST
Last Updated 11 ಜೂನ್ 2017, 19:30 IST

ಈಡೇರದ ಇಚ್ಛೆ
ಚಂಡೀಘಡ, ಜೂನ್
11– ‘ನಿಮ್ಮನ್ನು ಮತ್ತು ನನ್ನ ದೇಶವನ್ನು ಬೇಗ ನೋಡುತ್ತೇನೆ’. ವಿಶ್ವಸಂಸ್ಥೆ ತುರ್ತುಸೇನೆಯ ಗಾಯಗೊಂಡ ಸೈನಿಕರನ್ನು ಸಾಗಿಸುತ್ತಿದ್ದಾಗ ಗಾಜಾದಲ್ಲಿ ಮಡಿದ ಕ್ಯಾಪ್ಟನ್ ವಿಜಯ್ ಸಾಚಾರ್ ತಮ್ಮ ತಂದೆತಾಯಿಗಳಿಗೆ ಬರೆದ ಕೊನೆಯ ಪತ್ರದಲ್ಲಿ ಈ ರೀತಿ ತಿಳಿಸಿದ್ದಾರೆ.

ಅವರ ಪತ್ರ ಈ ರೀತಿಯಿದೆ: ‘ಇದು ಮತ್ತೊಂದು ಭಾರತ–ಪಾಕಿಸ್ತಾನ ಯುದ್ಧದಂತೆ ತೋರುತ್ತಿದೆ. ನಾನು ಸಯಾಲ್ ಕೋಟೆ ಕ್ಷೇತ್ರದಲ್ಲಿದ್ದುದರಿಂದ ಅದೇ ರೀತಿಯ ಸನ್ನಿವೇಶಗಳನ್ನು ಇಲ್ಲಿಯೂ ಕಾಣುತ್ತಿದ್ದೇನೆ. ಆದರೆ ಈ ಪ್ರದೇಶದಲ್ಲಿರುವ ಪಡೆಗಳಿಗೆ ತೊಂದರೆಯಾಗುವಷ್ಟರ ಮಟ್ಟಿಗೆ ತೀವ್ರ ಘರ್ಷಣೆ ಸಂಭವಿಸಲಾರದು’ ಎಂದು ನಾನು ಆಶಿಸುತ್ತೇನೆ.

‘ನಾವು ಸಿದ್ಧವಾಗಿದ್ದೇವೆ. ನಮ್ಮನ್ನು ಸ್ವದೇಶಕ್ಕೆ ಕೊಂಡೊಯ್ಯಲು ಭಾರತದಿಂದ ಹಡಗು ಬರುವುದನ್ನು ಕಾಯುತ್ತಿದ್ದೇವೆ. ಇಡೀ ಪ್ರದೇಶ ಇದ್ದಕ್ಕಿದ್ದಂತೆ ನಿರ್ಜನವಾಗಿದೆ. ನನ್ನಿಂದ ಏನೂ ವಿಷಯ ತಿಳಿದು ಬರದಿದ್ದರೆ ಗಾಬರಿಯಾಗಬೇಡಿ, ಆದರೆ ನಮಗೆ ಅಂಚೆ ತರುವಂತೆ ವ್ಯವಸ್ಥೆ ಮಾಡಿರುವುದರಿಂದ ನೀವು ಪತ್ರಗಳನ್ನು ಬರೆಯುವುದನ್ನು ನಿಲ್ಲಿಸಬೇಡಿ’. ‘ನಿಮ್ಮನ್ನು ಮತ್ತು ನನ್ನ ದೇಶವನ್ನು ಬೇಗ ನೋಡುತ್ತೇನೆ’.

ADVERTISEMENT

ಯೋಜನಾ ಆಯೋಗದ ಪುನರ್ರಚನೆ ಬಗ್ಗೆ ಜೂನ್ ತಿಂಗಳಲ್ಲೇ ನಿರ್ಧಾರ ಸಂಭವ
ನವದೆಹಲಿ, ಜೂ. 11–
ಯೋಜನಾ ಆಯೋಗದ ಪುನರ್ರಚನೆ ಬಗ್ಗೆ ಈ ಮಾಸಾಂತ್ಯದೊಳಗೆ ನಿರ್ಧಾರ ಕೈಗೊಳ್ಳುವ ಸಂಭವವಿದೆ ಎಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ಸೂಚ್ಯವಾಗಿ ತಿಳಿಸಿದರು.

ಯೋಜನಾ ಆಯೋಗವನ್ನು  ಹೇಗೆ ಪುನರ್ ವ್ಯವಸ್ಥೆ ಮಾಡಬೇಕು ಎಂಬ ಬಗ್ಗೆ ರಾಜ್ಯಗಳ ಮುಖ್ಯಮಂತ್ರಿಗಳೊಡನೆ ಹಾಗೂ ವಿರೋಧ ಪಕ್ಷಗಳ ನಾಯಕರೊಡನೆ ತಾವು ಚರ್ಚಿಸುವುದಾಗಿಯೂ ಅವರು ಹೇಳಿದರು.

ಈ ವರ್ಷ ಸಹಕಾರ ಸಂಘಗಳ ಮೂಲಕ ವ್ಯವಸಾಯಕ್ಕೆ 520 ಕೋಟಿ ರೂ. ಸಾಲ
ನವದೆಹಲಿ, ಜೂ. 11–
1967–68ರಲ್ಲಿ ಸಹಕಾರ ಸಂಸ್ಥೆಗಳ ಮೂಲಕ 520 ಕೋಟಿ ರೂ. ಅಲ್ಪ ಕಾಲಾವಧಿ ಹಾಗೂ ಮಧ್ಯಮ ಕಾಲಾವಧಿಯ ಕೃಷಿ ಸಾಲಗಳನ್ನು ಒದಗಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.