ADVERTISEMENT

ಸೋಮವಾರ, 25–9–1967

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST

ತುಂಗಭದ್ರ ನೀರು ಬಳಕೆಗೆ ಮತ್ತೆರಡು ಯೋಜನೆಗಳು
ಬೆಂಗಳೂರು, ಸೆ. 24–
ತುಂಗಭದ್ರ ನದಿಯ ನೀರನ್ನು ಉಪಯೋಗಿಸಿಕೊಳ್ಳುವ ಸಂಬಂಧದಲ್ಲಿ ಎರಡು ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆಯೆಂದು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲರು ಇಂದು ತಿಳಿಸಿದರು.

ತುಂಗಭದ್ರ ನದಿಯ ನೀರನ್ನು ಉಪಯೋಗಿಸಿಕೊಳ್ಳಲು ಮೈಸೂರು ರಾಜ್ಯಕ್ಕೆ ಇನ್ನೂ ಅವಕಾಶವಿದೆಯೆಂದು ಪ್ರದೇಶ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ತಿಳಿಸಿದ ಸಚಿವರು ‘ತುಂಗ ಮೇಲ್ದಂಡೆ ಮತ್ತು ತುಂಗಭದ್ರ ಮೇಲ್ದಂಡೆ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ’ ಎಂದರು.

ಕೃಷ್ಣಾ ಯೋಜನೆ ವೆಚ್ಚ 147 ಕೋಟಿ ರೂ.
ಬೆಂಗಳೂರು, ಸೆ. 24–
ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಿಮರ್ಶಿತ ಅಂದಾಜು ವೆಚ್ಚ 147 ಕೋಟಿ ರೂ.

ADVERTISEMENT

ಜನತೆಯೊಂದಿಗೆ ನಿಕಟ ಸಂಪರ್ಕ: ಕಾಂಗ್ರೆಸ್ಸಿಗರಿಗೆ ಪಿ.ಸಿ.ಸಿ. ಕರೆ
ಬೆಂಗಳೂರು ಸೆ. 24–
ಹಳ್ಳಿಗಳು ಮತ್ತು ಪಟ್ಟಣಗಳಲ್ಲಿನ ಜನತೆಯೊಂದಿಗೆ ಅದರಲ್ಲಿಯೂ ವಿದ್ಯಾವಂತ ವರ್ಗ, ಯುವಕರು, ಮಹಿಳೆಯರು, ರೈತರು ಮತ್ತು ಕಾರ್ಮಿಕರೊಂದಿಗೆ ನಿರಂತರ ಹಾಗೂ ನಿಕಟ ಸಂಪರ್ಕ ಬೆಳೆಸಿಕೊಳ್ಳುವಂತೆ ಕಾಂಗ್ರೆಸ್ಸಿಗರಿಗೆ ಪ್ರದೇಶ ಕಾಂಗ್ರೆಸ್ ಸಮಿತಿಯು ಇಂದು ಕರೆ ನೀಡಿತು.

‘ಜನಸಮೂಹದೊಂದಿಗೆ ಸಂಪರ್ಕ’ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದ ಪ್ರದೇಶ ಕಾಂಗ್ರೆಸ್ ಸಮಿತಿಯು ಕಾಂಗ್ರೆಸ್‌ನ ವಿವಿಧ ಅಂಗ ಸಂಸ್ಥೆಗಳು, ಕಾಂಗ್ರೆಸ್ ಶಾಸಕರು, ಕಾಂಗ್ರೆಸ್ ಸಮಿತಿಗಳು ಜನತೆಯೊಂದಿಗೆ ನಿಕಟಸಂಪರ್ಕ ಬೆಳೆಸಿ ‘ದೇಶದ ಸರ್ವತೋಮುಖ ಅಭಿವೃದ್ಧಿಗೆ ಏಕೈಕ ಮಾರ್ಗವಾದ’ ಪ್ರಜಾಸತ್ತಾತ್ಮಕ ಸಮಾಜವಾದಕ್ಕೆ ಜನರನ್ನು ಒಲಿಸಿಕೊಳ್ಳಬೇಕೆಂದು ಕರೆ ನೀಡಿದೆ.

ವಿಯಟ್ನಾಂ ಪ್ರಶ್ನೆ: ಭಾರತ ನೀತಿಯಲ್ಲಿ ಬದಲಾವಣೆ ಇಲ್ಲ
ನವದೆಹಲಿ, ಸೆ. 24–
ವಿಯಟ್ನಾಂ ಪ್ರಶ್ನೆಯನ್ನು ಕುರಿತ ಭಾರತದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರು ಇಂದು ಇಲ್ಲಿ ನುಡಿದರು.

ಮಾತುಕತೆಗೆ ಹಾದಿ ಮಾಡಿಕೊಡಲು ಎರಡೂ ಕಡೆಯವರು ಏಕಕಾಲದಲ್ಲಿ ಹೋರಾಟವನ್ನು ನಿಲ್ಲಿಸಬೇಕೆಂದು ಸರಕಾರದ ವಕ್ತಾರರೊಬ್ಬರು ಇತ್ತೀಚೆಗೆ ಸೂಚಿಸಿದ ಸಲಹೆಯ ಬಗ್ಗೆ ವಿಶೇಷ ಅರ್ಥ ಕಲ್ಪಿಸಬಾರದೆಂದೂ ಅವರು ನುಡಿದರು.

ಶಿಕ್ಷಣ ಅಯೋಗದ ಶಿಫಾರಸು ಜಾರಿ ಬಗ್ಗೆ ಉಪಕುಲಪತಿಗಳ ಸಮಿತಿ ರಚನೆ
ಕಲ್ಕತ್ತ, ಸೆ. 24–
ಪ್ರಾದೇಶಿಕ ಭಾಷೆಗಳನ್ನು ಶಿಕ್ಷಣ ಮಾಧ್ಯಮವನ್ನಾಗಿ ಮಾಡುವ ಬಗ್ಗೆ ಶಿಕ್ಷಣ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುವ ವಿಧಾನಗಳನ್ನು ರೂಪಿಸಲು ಶೀರ್ಘದಲ್ಲಿಯೇ ಉಪಕುಲಪತಿಗಳಿಂದ ಕೂಡಿದ ಸಮಿತಿಯೊಂದನ್ನು ನೇಮಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ.

ರಾಷ್ಟ್ರದ ನಾನಾ ವಿಭಾಗಕ್ಕೆ ಸೇರಿದ ನಾಲ್ವರು ಉಪಕುಲಪತಿಗಳಿರುವ ಈ ಸಮಿತಿಗೆ ‘ಯು.ಜಿ.ಸಿ.’ ಅಧ್ಯಕ್ಷ ಡಾ. ಡಿ.ಎಸ್. ಕೊಠಾರಿ ಅವರು ಅಧ್ಯಕ್ಷರಾಗಿರುತ್ತಾರೆಂದು ಇಂದು ಇಲ್ಲಿ ಪಿ.ಟಿ.ಐ.ಗೆ ನೀಡಿದ ಸಂದರ್ಶನದಲ್ಲಿ ಕೇಂದ್ರ ಶಿಕ್ಷಣ ಮಂತ್ರಿ ಡಾ. ತ್ರಿಗುಣ್ ಸೇನ್ ಅವರು ಪ್ರಕಟಿಸಿದರು.

ಮದರಾಸ್‌ನಲ್ಲಿ ಪಾನನಿರೋಧ ರದ್ದಿಗೆ ಒತ್ತಾಯ
ಮಧುರೆ, ಸೆ. 24–
ರಾಷ್ಟ್ರಾದ್ಯಂತ ಪಾನ ನಿರೋಧವು ವಿಫಲಗೊಂಡಿರುವುದರಿಂದ ಅದನ್ನು ರದ್ದುಪಡಿಸಬೇಕೆಂದು ವಾಮ ಕಮ್ಮುನಿಸ್ಟ್ ಪಕ್ಷದ ಮದರಾಸ್ ರಾಜ್ಯ ಸಮಿತಿಯು ಮದರಾಸ್ ಸರ್ಕಾರವನ್ನು ಒತ್ತಾಯಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.