ADVERTISEMENT

50 ವರ್ಷಗಳ ಹಿಂದೆ

ಸೋಮವಾರ, 5–12–1966

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2016, 19:30 IST
Last Updated 4 ಡಿಸೆಂಬರ್ 2016, 19:30 IST

ಹಾನಾಯ್‌ ಮೇಲೆ ಅಮೆರಿಕದ ಭೀಕರ ವಿಮಾನ ದಾಳಿ
ಹಾನಾಯ್‌, ಡಿ. 4–
ಮೂರು ದಿನಗಳಲ್ಲಿ ಎರಡನೆ ಬಾರಿ ಹಾನಾಯ್‌ ನಗರದ ಮೇಲೆ ಅಮೆರಿಕದ ಯುದ್ಧ ವಿಮಾನಗಳು ಭೀಕರ ದಾಳಿ ನಡೆಸಿ, ಉತ್ತರ ದಿಕ್ಕಿನ ಉಪನಗರದ ಮೇಲೆ ಬಾಂಬು ಹಾಗೂ ಗುಂಡಿನ ಮಳೆ ಸುರಿದವೆಂದು ಉತ್ತರ ವಿಯಟ್ನಾಂ ವಾರ್ತಾ ಸಂಸ್ಥೆಯು ಇಂದು ವರದಿ ಮಾಡಿದೆ.

***
ಗಾಂಧೀಜಿ ಪ್ರತಿಗಾಮಿ ಎಂದು ಸುಕರ್‍ನೊ
ಜಕಾರ್ತ, ಡಿ. 4– 
ಭಾರತದ ಮಹಾತ್ಮ ಗಾಂಧಿಯವರು ‘ಪ್ರತಿಗಾಮಿ’ ಸಾಮಾಜಿಕ ಆದರ್ಶಗಳನ್ನು ಹೊಂದಿದ್ದರೆಂದು ಇಂಡೊನೀಸಿಯದ ಅಧ್ಯಕ್ಷ ಸುಕರ್ನೊರವರು ಆಪಾದಿಸಿದ್ದಾರೆ. ಉಗ್ರಗಾಮಿ ಎಡಗುಂಪು ವಿದ್ಯಾರ್ಥಿಗಳ ಸಭೆಯನ್ನುದ್ದೇಶಿಸಿ ಇಲ್ಲಿ ಇಂದು ಅವರು ಮಾತನಾಡುತ್ತ, ‘ಗಾಂಧಿಯಲ್ಲಿ ರಾಜಕೀಯ ಆದರ್ಶಗಳ ಕೊರತೆ ಇದ್ದಿತು. ಬ್ರಿಟಿಷ್‌ ಆಡಳಿತದಿಂದ ಸ್ವತಂತ್ರವಾದ ಸ್ವತಂತ್ರ ರಾಷ್ಟ್ರಕ್ಕಾಗಿ ಬಯಸಲಿಲ್ಲ. ಅವರು ಬಯಸಿದ್ದು ಕೇವಲ ‘ಹೋಂ ರೂಲ್‌ ಮಾತ್ರ’ ಎಂದರು.

ಮಹಾತ್ಮ ಗಾಂಧಿಯವರ ಸಾಮಾಜಿಕ ಆದರ್ಶಗಳು ಕೂಡ ‘ಪ್ರತಿಗಾಮಿ’ಯಾಗಿದ್ದವೆಂದು ಹೇಳಿದರು. ಪ್ರತಿ ಭಾರತೀಯ ಕುಟುಂಬವೂ ತನ್ನ ಸ್ವಂತ ಅಗತ್ಯ ಪೂರೈಸುವಷ್ಟು ಉತ್ಪಾದಿಸುವುದೆಂಬ ಕನಸು ಗಾಂಧಿಯವರದಾಗಿದ್ದಿತು ಎಂದು ತಿಳಿಸಿದರು.

***
ಆಸ್ಟ್ರೇಲಿಯಾದಿಂದ ಭಾರತಕ್ಕೆ ಮತ್ತೆ ಏಳು ಲಕ್ಷ ಟನ್‌ ಗೋಧಿ ಮಾರಾಟ ಸಂಭವ
ಕ್ಯಾನ್‌ಬೆರ್ರಾ, ಡಿ. 4–
ಭಾರತಕ್ಕೆ ಗೋಧಿ ಮಾರುವ ಮತ್ತೊಂದು ಒಪ್ಪಂದದ ಬಗ್ಗೆ ತಾವು ಇಷ್ಟರಲ್ಲೇ ಸಂಧಾನ ನಡೆಸುವುದಾಗಿ ಆಸ್ಟ್ರೇಲಿಯಾದಲ್ಲಿ ಭಾರತದ ಹೈಕಮಿಷನರ್‌ ಆಗಿರುವ ಶ್ರೀ ಡಿ.ಎನ್‌. ಚಟರ್ಜಿ ಅವರು ಇಂದು ರಾತ್ರಿ ಇಲ್ಲಿ ತಿಳಿಸಿದರು.

ಅದು ಏಳು ಲಕ್ಷ ಟನ್ನಿಗೂ ಹೆಚ್ಚಾಗಬಹುದುದೆಂದೂ ಅವರು ತಿಳಿಸಿದರು. ಕಳೆದ ಬುಧವಾರ ಒಂದೂವರೆ ಲಕ್ಷ ಟನ್‌ ಗೋಧಿ ಮಾರಾಟಕ್ಕೆ ಸಂಬಂಧಿಸಿದಂತೆ ಭಾರತ ಆಸ್ಟ್ರೇಲಿಯಾದ ಗೋಧಿ ಮಂಡಳಿಯೊಡನೆ ಮಾತುಕತೆ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.