ADVERTISEMENT

50 ವರ್ಷಗಳ ಹಿಂದೆ

ಗುರುವಾರ, 8–12–1966

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2016, 19:30 IST
Last Updated 7 ಡಿಸೆಂಬರ್ 2016, 19:30 IST

ಗೋಹತ್ಯಾ ನಿಷೇಧ ಚಳವಳಿ ಸಂಬಂಧದಲ್ಲಿ ಕೇಂದ್ರ ಸಚಿವರಿಗೆ ಬೆದರಿಕೆ ಪತ್ರ
ನವದೆಹಲಿ, ಡಿ. 7–
ಕೇಂದ್ರದ ಸಚಿವರು ಅಪಾಯಕಾರಿ ಪರಿಣಾಮಗಳನ್ನು ಎದುರಿಸಬೇಕಾಗುವುದೆಂಬ ಬೆದರಿಕೆ ಪತ್ರವೊಂದು ಕಾಂಗ್ರೆಸ್‌ ಪಾರ್‍ಲಿಮೆಂಟರಿ ಪಕ್ಷದ ಕಾರ್ಯದರ್ಶಿ ಶ್ರೀ ರಘುನಾಥ ಸಿಂಗ್‌ರವರಿಗೆ ಬಂದಿದೆ.

ಗೋಹತ್ಯಾ ನಿಷೇಧಕ್ಕಾಗಿ ಒತ್ತಾಯ ಪಡಿಸಲು, ಈಗ ಉಪವಾಸ ನಿರತರಾಗಿರುವ ನಾಯಕರಾರಾದರೂ ಗತಿಸಿದರೆ ಈ ಬೆದರಿಕೆಯನ್ನು ಕಾರ್‍ಯರೂಪಕ್ಕೆ ತರಲಾಗುವುದೆಂದು ಆ ಪತ್ರ ತಿಳಿಸಿದೆ.

***
ಸಚಿವರುಗಳ ‘ವೈಭವ’ದ ಜೀವನ, ಸೌಲಭ್ಯ ಕುರಿತು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ
ನವದೆಹಲಿ, ಡಿ. 7–
ಸಚಿವರುಗಳು, ಯೋಜನಾ ಆಯೋಗದ ಸದಸ್ಯರು ಹಾಗೂ ಉನ್ನತಾಧಿಕಾರಿಗಳು ‘ವೈಭವ’ದ ಜೀವನ ನಡೆಸುತ್ತಿದ್ದಾರೆಂಬ ಟೀಕೆಯನ್ನು ರಾಜ್ಯಸಭೆಯಲ್ಲಿ ಇಂದು ಪ್ರಸ್ತಾಪಿಸಲಾಯಿತು. ಯೋಜನಾ ಆಯೋಗದ ಸದಸ್ಯ ಡಾ. ವಿ.ಕೆ.ಆರ್‌.ವಿ. ರಾವ್‌ ಇತ್ತೀಚೆಗೆ ಅಂತಹ ಟೀಕೆ ಮಾಡಿದ್ದರೆಂದು ಹೇಳಲಾಗಿದೆ. ‘ಸಚಿವರೊಬ್ಬರ ವೇತನ ಹಾಗೂ ಇತರ ವೆಚ್ಚದ ಬಗ್ಗೆ ಖರ್ಚೆಷ್ಟಾಗುತ್ತದೆ? ಈ ವೆಚ್ಚದಲ್ಲಿ ಖೋತಾ ಮಾಡಿಕೊಳ್ಳಲಾಗಿದೆಯೆ?’ ಎಂದು ಶ್ರೀ ಎ.ಡಿ. ಮಣಿ, ಶ್ರೀ ಜಿ. ಮುರಹರಿ ಹಾಗೂ ಶ್ರೀ ರಾಜನಾರಾಯಣ್‌ ಪ್ರಶ್ನಿಸಿದರು.

***
ನಾಟಕ ವಿಮರ್ಶೆಗೆ ಬಹುಮಾನ

ಎಂದಿನಂತೆ ಈ ಬಾರಿಯೂ ನಾಟ್ಯ ಸಂಘದ ಆಶ್ರಯದಲ್ಲಿ ಡಿಸೆಂಬರ್‌ 10 ರಿಂದ 16ರ ವರೆಗೆ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತರಕಾಲೇಜು ನಾಟಕ ಸ್ಪರ್ಧೆ ನಡೆಯಲಿದೆಯಷ್ಟೆ. ಈ ವರ್ಷವೂ ಈ ಸ್ಪರ್ಧೆಯ ಅತ್ಯುತ್ತಮ ವಿಮರ್ಶೆಗೆ ‘ಪ್ರಜಾವಾಣಿ’ 100 ರೂ.ಗಳ ಒಂದು ವಿಶೇಷ ಬಹುಮಾನ ನೀಡಲಿದೆ. ಕಾಲೇಜು ವಿದ್ಯಾರ್ಥಿಗಳು ಕನ್ನಡದಲ್ಲಿ ಬರೆದ ವಿಮರ್ಶೆಗಳನ್ನು ಸಂಪಾದಕ, ‘ಪ್ರಜಾವಾಣಿ’, 16, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–1, ಈ ವಿಳಾಸಕ್ಕೆ ಡಿಸೆಂಬರ್‌ 19ರಂದು ಸೋಮವಾರ ಸಂಜೆ 5 ಗಂಟೆಯೊಳಗೆ ತಲುಪಿಸಬೇಕು.
–ಸಂಪಾದಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.