ADVERTISEMENT

ಸೋಮವಾರ, 15–1–1968

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 19:30 IST
Last Updated 14 ಜನವರಿ 2018, 19:30 IST

ಘೋಷ್ ಸಂಪುಟಕ್ಕೆ 6 ಮಂದಿ ಕಾಂಗ್ರೆಸ್ ಸಚಿವರು

ಕಲ್ಕತ್ತ, ಜ. 14– ಆರು ಮಂದಿ ಕಾಂಗ್ರೆಸ್ ಶಾಸಕರು ಸಚಿವರಾಗಿ ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಕಾಂಗ್ರೆಸ್ ಹಾಗೂ ‍ಪ್ರಗತಿಶೀಲ ಜನತಂತ್ರರಂಗದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ.

ನಾಳೆ ಪ್ರಮಾಣವಚನ ಸ್ವೀಕರಿಸುವ ಕಾಂಗ್ರೆಸ್ ಮಂತ್ರಿಗಳು ಕ್ಯಾಬಿನೆಟ್ ದರ್ಜೆಯನ್ನು ಪಡೆಯುವರು.

ADVERTISEMENT

*

ಚಾಲಕನಿಲ್ಲದ ಕಾರು

ನವದೆಹಲಿ, ಜ. 14– ‘ಶಿರರಹಿತ ಆಶ್ವಾರೋಹಿ’ ರಷ್ಯದ ಮೊತ್ತ ಮೊದಲ ಚಾಲಕ ರಹಿತ ಮೋಟಾರು ಕಾರು ಮಾಸ್ಕೋದ ಬೀದಿಗಳಲ್ಲಿ ಪ್ರಾಯೋಗಿಕ ಓಡಾಟವನ್ನು ಯಶಸ್ವಿಯಾಗಿ ನಡೆಸಿದೆ.

ಅತಿ ಜಾಗರೂಕತೆ ಹಾಗೂ ದಕ್ಷ ಚಾಲಕನ ಸ್ಥಾನದಲ್ಲಿ ಎಲೆಕ್ಟ್ರಾನಿಕ್ಸ್ ಉಪಕರಣವೊಂದು ಕೆಲಸ ನಿರ್ವಹಿಸುವ ಈ ಕಾರನ್ನು ವ್ಯಾಪಾರ ದೃಷ್ಟಿಯಿಂದ ಉತ್ಪಾದಿಸಲು ಯೋಚಿಸಲಾಗುತ್ತಿದೆ.

*

ಕಾಶ್ಮೀರಿಗಳ ಆಜನ್ಮ ಹಕ್ಕಿನ ಹರಣಕ್ಕೆ ಎಂದಿಗೂ ಅವಕಾಶ ನೀಡೆ: ಷೇಖ್

ನವದೆಹಲಿ, ಜ. 14– ಕಾಶ್ಮೀರದ ಭವಿಷ್ಯವನ್ನು ಮುಕ್ತವಾದ ಮನಸ್ಸಿನಿಂದ ನಿರ್ಧರಿಸಲು ಕಾಶ್ಮೀರ ಜನತೆಗೆ ಇರುವ ಜನ್ಮಸಿದ್ಧ ಹಕ್ಕನ್ನು ಕಸಿದುಕೊಳ್ಳಲು ಭಾರತಕ್ಕಾಗಲೀ ಪಾಕಿಸ್ತಾನ ಅಥವಾ ಬೇರೆ ಯಾವುದೇ ರಾಷ್ಟ್ರಕ್ಕಾಗಲೀ ಕಾಶ್ಮೀರ ಜನರು ಅವಕಾಶ ಕೊಡರು ಎಂದು ಷೇಕ್ ಅಬ್ದುಲ್ಲಾ ಇಂದು ಹೇಳಿದರು.

*

ದೀಪಾವಳಿಗೆ ಹೊಂದುವಂತೆ ಆರ್ಥಿಕ ವರ್ಷ: ಕೆಂಗಲ್ ಆಯೋಗದ ಶಿಫಾರಸ್

ನವದೆಹಲಿ, ಜ. 14– ಏಪ್ರಿಲ್ 1ನೇ ತಾರೀಕಿನಿಂದ ಆರ್ಥಿಕ ವರ್ಷ ಪ್ರಾರಂಭಿಸುವ ಪ್ರಸಕ್ತ ಪದ್ಧತಿ ಯಾವುದೇ ಸಂಪ್ರದಾಯವನ್ನಾಗಲಿ, ರಾಷ್ಟ್ರದ ಅಗತ್ಯಗಳನ್ನಾಗಲಿ ಆಧರಿಸಿಲ್ಲವೆಂದು ಆಡಳಿತ ಸುಧಾರಣಾ ಆಯೋಗ ತಿಳಿಸಿ ಅದು ನ. 1 ರಿಂದ ಪ್ರಾರಂಭವಾಗಲೆಂದು ಸರಕಾರಕ್ಕೆ ಶಿಫಾರಸು ಮಾಡಿದೆ.

ಶ್ರೀ ಕೆ. ಹನುಮಂತಯ್ಯನವರು ಅಧ್ಯಕ್ಷರಾಗಿರುವ ಈ ಆಯೋಗವು ಹಣಕಾಸು, ಲೆಕ್ಕಪತ್ರ (ಅಕೌಂಟ್ಸ್) ಮತ್ತು ಆಡಿಟ್ ಬಗ್ಗೆ ‍ಪ್ರಧಾನಿಗೆ ನಿನ್ನೆ ಒಂದು ವರದಿ ಸಲ್ಲಿಸಿ ‘ಭಾರತದ ಜನರು ತಮ್ಮ ಆರ್ಥಿಕ ವರ್ಷ ಪ್ರಾರಂಭಿಸುವ ಸಂಪ್ರದಾಯವಿಟ್ಟು ಕೊಂಡಿರುವ ದೀಪಾವಳಿಗೆ ಹೊಸ ಆರ್ಥಿಕ ವರ್ಷ ಹೊಂದಿಕೊಂಡಿರಬೇಕು’ ಎಂದಿದೆ.

*

ಕೇಂದ್ರದಲ್ಲಿ ದ್ವಿಭಾಷಾ ವ್ಯವಸ್ಥೆ ಅದಕ್ಷತೆಗೆ ಉತ್ತೇಜಕ

ಮದ್ರಾಸ್, ಜ. 14– ಕೇಂದ್ರದಲ್ಲಿ ದ್ವಿಭಾಷಾ ಪದ್ಧತಿ ಇದ್ದರೆ ಅದರಿಂದ ಎಲ್ಲ ಕೇಂದ್ರ ಸರಕಾರಿ ಕಚೇರಿಗಳಲ್ಲೂ ಗೊಂದಲ, ವಿಳಂಬ, ವೆಚ್ಚ, ಅದಕ್ಷತೆ, ಪಿತೂರಿ ಮತ್ತು ಅಶಿಸ್ತು ಹೆಚ್ಚುವುದೆಂದು ಸ್ವತಂತ್ರ ಪಕ್ಷದ ನಾಯಕ ಶ್ರೀ ಸಿ. ರಾಜಗೋಪಾಲಚಾರಿಯವರು ನಿನ್ನೆ ಇಲ್ಲಿ ಹೇಳಿಕೆಯೊಂದರಲ್ಲಿ ಅಭಿಪ್ರಾಯ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.