ADVERTISEMENT

ಸೋಮವಾರ, 29–1–1968

​ಪ್ರಜಾವಾಣಿ ವಾರ್ತೆ
Published 28 ಜನವರಿ 2018, 19:30 IST
Last Updated 28 ಜನವರಿ 2018, 19:30 IST

ಬಿಹಾರ ಮುಖ್ಯಮಂತ್ರಿಯಾಗಿ ಎಸ್.ಪಿ. ಸಿಂಗ್

ಪಟ್ನ, ಜ. 28– ಎಸ್.ಎಸ್.ಪಿ.ಯಿಂದ ಪಕ್ಷಾಂತರಗೊಂಡ ಶೋಷಿತ ದಳದ ಸದಸ್ಯ ಶ್ರೀ ಸತೀಶ್ ಪ್ರಸಾದ್ ಸಿಂಗ್ ಅವರು ಇಂದು ಸಂಜೆ ಬಿಹಾರದ ಹೊಸ ಮುಖ್ಯಮಂತ್ರಿಯಾಗಿ ರಾಜ್ಯಪಾಲ ಶ್ರೀ ನಿತ್ಯಾನಂದ ಕನುಂಗೋ ಅವರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ಎನ್.ಸಿ.ಸಿ.ಯಲ್ಲಿ ಭಾಷಾ ಗೊಂದಲ ಅಪಾಯಕಾರಿ: ಜ. ಕಾರಿಯಪ್ಪ

ADVERTISEMENT

ಬೆಂಗಳೂರು, ಜ. 28– ‘ಶಿಸ್ತಿನ ಸಿಪಾಯಿಗಳಾಗಿ ವರ್ತಿಸಬೇಕಾದ ಎನ್.ಸಿ.ಸಿ. ಕೆಡೆಟ್‌ಗಳು ಹಿಂದಿಯಲ್ಲಿ ಆಜ್ಞೆ ಮಾಡಿದರೆ ನಮಗೆ ಬೇಕಿಲ್ಲ ಇಂಗ್ಲೀಷ್‌ನಲ್ಲಿ ಮಾಡಿ ಎಂದು ಹೇಳುವುದು ಅತ್ಯಂತ ಕಳವಳಕಾರಿಯಾದ ವಿಚಾರ’ ಎಂದು ಭಾರತದ ಮಾಜಿ ಮಹಾದಂಡನಾಯಕ ಜ. ಕೆ.ಎಂ. ಕಾರಿಯಪ್ಪನವರು ಇಂದು ವಿಷಾದಪಟ್ಟರು.

ಪ್ಯುಬ್ಲೊ ನೌಕೆಯಿಂದ ಉತ್ತರ ಕೊರಿಯಾ ಜಲ ಪ್ರದೇಶ ಉಲ್ಲಂಘನೆ– ಕೊಸಿಗಿನ್

ಹರಿದ್ವಾರ, ಜ. 28– ಅಮೆರಿಕದ ಗೂಢಚಾರ ನೌಕೆ ‘ಪ್ಯುಬ್ಲೊ’ ಉತ್ತರ ಕೊರಿಯಾದ ಜಲಪ್ರದೇಶವನ್ನು ಉಲ್ಲಂಘಿಸಿರುವುದು ತಮಗೆ ಮನದಟ್ಟಾಗಿದೆ ಎಂದು ರಷ್ಯಾ ಪ್ರಧಾನಿ ಕೊಸಿಗಿನ್ ಇಂದು ಹೇಳಿದರು.

ಈ ಎರಡು ರಾಷ್ಟ್ರಗಳಿಂದ ಮಾತ್ರ ಈಗ ಉತ್ತರ ಕೊರಿಯಾ ವಶಪಡಿಸಿಕೊಂಡ ನೌಕೆಯ ಸಮಸ್ಯೆಯನ್ನು ಇತ್ಯರ್ಥಪಡಿಸಲು ಸಾಧ್ಯ ಎಂದು ಅವರು ವಿದೇಶೀ ಪತ್ರಕರ್ತರಿಗೆ ತಿಳಿಸಿದರು.

ಕೊರಿಯಾದತ್ತ ಅಮೆರಿಕದ ನೌಕಾ ತಂಡ

ಸಿಯೋಲ್, ಜ. 28– ಸೆರೆ ಹಿಡಿಯಲಾಗಿರುವ ಪ್ಯುಬ್ಲೋ ನೌಕೆ ಮತ್ತು ಅದರಲ್ಲಿನ ಸಿಬ್ಬಂದಿ ವರ್ಗದವರನ್ನು ಕೂಡಲೆ ಬಿಡುಗಡೆ ಮಾಡುವಂತೆ ಉತ್ತರ ಕೊರಿಯಾ ಮೇಲೆ ಒತ್ತಾಯ ಹೇರುವ ಉದ್ದೇಶದಿಂದ ಅಮೆರಿಕದ ನೌಕಾವ್ಯೂಹ ಕೊರಿಯಾದ ಜಲಪ್ರದೇಶದೆಡೆಗೆ ಸಾಗಿದೆಯೆಂದು ನಿನ್ನೆ ಇಲ್ಲಿಗೆ ವರದಿಯಾಗಿದೆ.

ಹರಿದ್ವಾರದಲ್ಲಿ ಅಲೆಕ್ಸಿ ಕೊಸಿಗಿನ್

ಹರಿದ್ವಾರ, ಜ. 28– ರಷ್ಯದ ನೆರವಿನಿಂದ ಇಲ್ಲಿ ಸ್ಥಾಪಿಸಲಾಗಿರುವ ಕ್ರಿಮಿನಿರೋಧಕ ಔಷಧಿಗಳ ಕಾರ್ಖಾನೆ ಹಾಗೂ ಹೆವಿ ಎಲೆಕ್ಟ್ರಿಕಲ್ಸ್ ಕಾರ್ಖಾನೆಗೆ ರಷ್ಯದ ಪ್ರಧಾನಮಂತ್ರಿ ಅಲೆಕ್ಸಿ ಕೊಸಿಗಿನ್‌ರವರು ಇಂದು ಭೇಟಿ ನೀಡಿದ್ದರು.

ಗೌಹಾತಿ ಗಲಭೆಯಲ್ಲಿ ವಿದೇಶಿ ಕೈವಾಡ: ಚಾಲಿಕ ಶಂಕೆ

ಗೌಹಾತಿ, ಜ.28– ಗೌಹಾತಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಗಲಭೆಗಳಲ್ಲಿ ‘ವಿದೇಶಿಯರ ಕೈವಾಡ’ವಿದ್ದಲ್ಲಿ ಆಶ್ಚರ್ಯವೇನೂ ಇಲ್ಲವೆಂದು ಅಸ್ಸಾಮಿನ ಮುಖ್ಯಮಂತ್ರಿ ಶ್ರೀ ಬಿ.ಪಿ. ಚಾಲಿಹ ಅವರು ಇಂದು ಇಲ್ಲಿ ಹೇಳಿದರು.

‘ಪಾಕಿಸ್ತಾನಕ್ಕೆ ಹೋಗಿ ತರಬೇತಿ ಪಡೆಯಲು ಗುಡ್ಡಗಾಡು ಜಿಲ್ಲೆಯಲ್ಲಿ ಜನರನ್ನು ಪ್ರಚೋದಿಸುವ ಬಗ್ಗೆ ನಮಗೆ ಸಾಕ್ಷ್ಯ ದೊರೆತಿದೆ’ ಎಂದು ಅವರು ತಿಳಿಸಿದರು.

ಚಿತ್ತೂರಿನಲ್ಲಿ ಗೋಲಿಬಾರ್‌: ಎರಡು ಸಾವು

ಹೈದರಾಬಾದ್‌, ಜ.28– ಚಿತ್ತೂರಿನಲ್ಲಿ ಹಿಂದಿ ವಿರೋಧಿ ಚಳವಳಿಕಾರರ ಮೇಲೆ ನಿನ್ನೆ ಸಂಜೆ ಪೊಲೀಸರು ಗುಂಡು ಹಾರಿಸಿದ ಪ್ರಯುಕ್ತ ಇಬ್ಬರು ಸಾವನ್ನಪ್ಪಿದರು. ಮೂವರಿಗೆ ಗಾಯಗಳಾಗಿವೆ ಎಂದು ಅಧಿಕೃತ ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.