ADVERTISEMENT

ಅಂತರಕ್ಕೆ ರೂಪಕ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2015, 19:30 IST
Last Updated 26 ಮಾರ್ಚ್ 2015, 19:30 IST

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸುವ ಸಂದರ್ಭದಲ್ಲಿ (ಮಾ. 25) ಎಂ. ಚಿದಾನಂದ ಮೂರ್ತಿ, ಪ್ರಮೀಳಾ ನೇಸರ್ಗಿ, ಎಸ್.ವಿದ್ಯಾಶಂಕರ್ ಮತ್ತಿತರರು ಪ್ರತಿಭಟಿಸಿದ್ದಾರೆ. ಕಾರಣ ದೇವರ ದಾಸಿಮಯ್ಯ ವಚನಕಾರನಲ್ಲ, ಜೇಡರ ದಾಸಿಮಯ್ಯ ಆದ್ಯ ವಚನಕಾರ ಎನ್ನುವುದು.

ಅದೇ ದಿನ ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿಯಲ್ಲಿ ಮಹಿಳಾ ಅಭಿವೃದ್ಧಿ ನಿಗಮ ಪುನರ್ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಅನಗತ್ಯ ಕಿರುಕುಳ ನೀಡುವ ಪಿಡಿಒಗಳ ವಿರುದ್ಧ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ನೇತೃತ್ವದಲ್ಲಿ ನೂರಾರು ದೇವದಾಸಿಯರು ಪ್ರತಿಭಟನೆ ಮಾಡಿದ್ದಾರೆ.

ಈ ಎರಡೂ ಸುದ್ದಿಗಳು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿವೆ.  ಒಂದು ಸಾಹಿತ್ಯ ಕೇಂದ್ರಿತ ಪ್ರತಿಭಟನೆ, ಮತ್ತೊಂದು ಬದುಕಿಗಾಗಿನ ಹೋರಾಟ. ಇದು ಸಾಹಿತ್ಯ ಮತ್ತು ಜನಬದುಕಿನ ನಡುವಣ ಅಂತರಕ್ಕೆ ರೂಪಕದಂತಿದೆ. ಚಿಮೂ ಮೊದಲಾದವರಿಗೆ ಜೇಡರ ದಾಸಿಮಯ್ಯ ದೇವರ ದಾಸಿಮಯ್ಯನಾದದ್ದು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ. ಆದರೆ ದೇವರ ಹೆಸರಲ್ಲಿ ಪಟ್ಟಭದ್ರರ ಶೋಷಣೆಯ ಕಾರಣಕ್ಕೆ ದೇವದಾಸಿಯಾದಂಥವರ ಬದುಕಿನ ಕಷ್ಟಗಳು ಸಮಸ್ಯೆಯಾಗಿ ಕಾಣುವುದಿಲ್ಲ.

ಮುಂದಾದರೂ ಸಾಮಾನ್ಯ ಜನರ ಸಮಸ್ಯೆಗಳ ವಿರುದ್ಧದ ಪ್ರತಿಭಟನೆಗಳಲ್ಲಿ ಚಿಮೂ ಮೊದಲಾದ ಸಂಶೋಧಕರು, ಸಾಹಿತಿಗಳು ಪಾಲ್ಗೊಳ್ಳುವಂತಾಗಲಿ. ಆಗ ಕನ್ನಡ ಸಾಹಿತ್ಯ, ಸಾಹಿತಿಗಳ ಬಗ್ಗೆ ಜನರಲ್ಲಿ ಗೌರವ ಮೂಡುತ್ತದೆ.
ಅರುಣ್ ಜೋಳದಕೂಡ್ಲಿಗಿ
ವಿದ್ಯಾರಣ್ಯ (ಕಮಲಾಪುರ), ಹೊಸಪೇಟೆ ತಾಲ್ಲೂಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.