ADVERTISEMENT

ಅನುಕರಣೀಯ

ಎಂ.ಅಬ್ದುಲ್ ರೆಹಮಾನ್ ಪಾಷ
Published 31 ಮಾರ್ಚ್ 2015, 19:30 IST
Last Updated 31 ಮಾರ್ಚ್ 2015, 19:30 IST

ರೋನ್ ಹೊವರ್ಡ್ ನಿರ್ದೇಶನದ ‘ಡಾ ವಿಂಚಿ ಕೋಡ್’ ಚಿತ್ರ 2006ರ ಮೇ  ತಿಂಗಳಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಯಿತು. ಇದು ಡ್ಯಾನ್ ಬ್ರೌನ್‌ನ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿತ್ತು. ಯೇಸುವಿಗೆ ಮದುವೆಯಾಗಿತ್ತು; ಸಾಂಪ್ರದಾಯಿಕ ಚರ್ಚು ವೇಶ್ಯೆಯೆಂದು ಬಣ್ಣಿಸಿದ್ದ ಮ್ಯಾಗ್ದಲೀನ್ ಮೇರಿಯೇ ಆತನ ಹೆಂಡತಿ; ಆತ ಶಿಲುಬೆಗೇರುವ ಹೊತ್ತಿಗೆ ಹೆಂಡತಿ ಮೇರಿ ಗರ್ಭಿಣಿಯಾಗಿದ್ದಳು. ಈಗಲೂ ಯೇಸುವಿನ ಸಂತತಿ ಜಗತ್ತಿನಲ್ಲಿ ಇದೆ ಎಂದು ಪ್ರತಿಪಾದಿಸಿತು ಆ ಚಿತ್ರ. ಇದು ಕ್ರಿಶ್ಚಿಯನ್ ಧರ್ಮದ ಬುನಾದಿಯನ್ನೇ ಅಲುಗಾಡಿಸುವಂಥ ಸಂಗತಿಯಾಗಿತ್ತು. ಆದರೆ, ಇದಕ್ಕೆ ವ್ಯಾಟಿಕನ್ ಚರ್ಚ್ ಪ್ರತಿಕ್ರಿಯಿಸಿದ ರೀತಿ ಅನುಕರಣೀಯವಾಗಿತ್ತು.

‘ಕಾದಂಬರಿ ಮತ್ತು ಚಿತ್ರ ಮಾತಾಡುತ್ತಿರುವುದು ನಾವು ನಂಬಿಕೊಂಡು ಬಂದಿರುವ ಜೀಸಸ್ ಕುರಿತಲ್ಲ. ಅದು ಅವರ ಕಥೆ. ಅದಕ್ಕೂ ನಾವು ಆರಾಧಿಸಿಕೊಂಡು ಬಂದಿರುವ ಜೀಸಸ್‌ಗೂ ಸಂಬಂಧವೇ ಇಲ್ಲ. ಆದ್ದರಿಂದ ಶ್ರದ್ಧಾವಂತ ಕ್ರಿಶ್ಚಿಯನ್ನರು ಇದರ ಕುರಿತು ತಲೆ ಕೆಡಿಸಿಕೊಳ್ಳಬೇಕಾಗಿಲ್ಲ’ ಎಂದಿತು ವ್ಯಾಟಿಕನ್ ಚರ್ಚ್. ಈ ನಿರ್ಧಾರದ ಮೂಲಕ ಇಡೀ ಜಗತ್ತಿನಲ್ಲಿ ಆಗಬಹುದಾಗಿದ್ದ ಸಾವು–ನೋವುಗಳನ್ನು ಅದು ಜೀಸಸ್ ಹೆಸರಿನಲ್ಲಿ ತಡೆದಿತ್ತು.

ಜಗತ್ತಿನಲ್ಲಿ ಯೇಸುವಿನ ಕುರಿತು ಅನೇಕ ‘ಗಾಸ್ಪೆಲ್‌’ಗಳು ಇವೆ. ಅವುಗಳಲ್ಲಿ ನಾಲ್ಕನ್ನು ಮಾತ್ರ ನಂಬಿಕೆಗೆ ಅರ್ಹವೆಂದು ವ್ಯಾಟಿಕನ್ ಅಧಿಕೃತಗೊಳಿಸಿತು. ಉಳಿದವನ್ನು ಅದು ಉಪೇಕ್ಷಿಸಿತು. ಈ ಸತ್ಯದ ಅರಿವು ಇಂಥ ವಿವೇಕಕ್ಕೆ ಬುನಾದಿಯಾಗಿತ್ತು.

ನಮ್ಮಲ್ಲಿಯೂ ರಾಮಾಯಣ, ಮಹಾಭಾರತಗಳ ಹಲವಾರು ಆವೃತ್ತಿಗಳಿವೆ. ಆಯಾ ಕಾಲ, ಕೃತಿಕಾರರ ಧೋರಣೆಗೆ ತಕ್ಕಂತೆ ಮೂಲಭೂತ ಎನ್ನಬಹುದಾದ ಬದಲಾವಣೆಗಳನ್ನೂ ಮೈಗೂಡಿಸಿಕೊಂಡಿವೆ. ಇನ್ನು ಜನಪದದಲ್ಲಿ ಊರೂರಿಗೂ ಭಿನ್ನವಾದ ರಾಮಾಯಣ, ಮಹಾಭಾರತ ಇವೆ. ಕೆ.ಎಸ್. ಭಗವಾನ್‌ರಂಥವರು ಇಂಥದೇ ರಾಮಾಯಣದಲ್ಲಿ ಈ ರೀತಿ ಇದೆ ಎಂದು ಹೇಳಿದರೆ, ಅವರಿಗಿಂತ ಹೆಚ್ಚು ಬಲ್ಲವರು ಹಾಗೆಲ್ಲಿದೆ ಎಂದು ಪ್ರತಿಪಾದಿಸಲು ಹೇಳಿದರೆ ಸಾಕು, ಪ್ರಶ್ನೆ ಬಗೆಹರಿದು ಹೋಯಿತು. ಇಲ್ಲವೇ, ವ್ಯಾಟಿಕನ್ ಚರ್ಚ್ ಮಾಡಿದ ಹಾಗೆ, ನಮ್ಮ ಶ್ರದ್ಧೆಯ ರಾಮನಿಗೂ ವಿಚಾರವಾದಿಗಳು ಮಾತಾಡುವ ರಾಮನಿಗೂ ಸಂಬಂಧವೇ ಇಲ್ಲ ಎಂದು ಉಪೇಕ್ಷೆ ಮಾಡಬೇಕು. ಇದು ನಾಗರಿಕ ವಿಧಾನ. ಟೀಕಾಕಾರರನ್ನು ದೇವರೇ ನೋಡಿಕೊಳ್ಳುತ್ತಾನೆ ಬಿಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.