ADVERTISEMENT

ಅಭಿವೃದ್ಧಿಯ ಈ ಬಗೆ....

ರಮಣಿ, ಜೆ.ಪಿ.ನಗರ
Published 21 ಏಪ್ರಿಲ್ 2014, 19:30 IST
Last Updated 21 ಏಪ್ರಿಲ್ 2014, 19:30 IST

ಮೊನ್ನೆಯಷ್ಟೇ ಮುಗಿದ ಲೋಕಸಭಾ ಚುನಾವಣೆ ಸಂದರ್ಭ ಜೆ.ಪಿ.ನಗರ ಏಳನೇ ಹಂತದ ಮತಗಟ್ಟೆಯಾಚೆ ಮತದಾರರನ್ನು ಕೊನೆಯ ಕ್ಷಣದ ಮನವೊಲಿಕೆಯಲ್ಲಿ ತೊಡಗಿದ್ದ ರಾಜಕೀಯ ಪಕ್ಷದ ಬೆಂಬಲಿಗರನ್ನು ಹಿರಿಯ ನಾಗರಿಕರೊಬ್ಬರು, ಸುಸ್ಥಿತಿಯಲ್ಲಿದ್ದ ರಸ್ತೆಗಳನ್ನು ಮೋರಿ, ಮ್ಯಾನ್‌ಹೋಲ್‌ ದುರಸ್ತಿ ಹೆಸರಿನಲ್ಲಿ ಹಾಳುಗೆಡವಿ ಇಟ್ಟ ನಿಮಗೆ ಯಾಕೆ ವೋಟು ಹಾಕಬೇಕು ಎಂದು ತರಾಟೆಗೆ ತೆಗೆದುಕೊಂಡರು. ಸುತ್ತಮುತ್ತಲಿದ್ದ ಅದೇ ಪಕ್ಷದವರೂ, ಸಾರ್ವಜನಿಕರೂ ಜೋರಾಗಿ ನಕ್ಕರು.

ಬೆಂಗಳೂರಿನ ಬಹುತೇಕ ಎಲ್ಲಾ ಪ್ರದೇಶಗಳ ಒಳರಸ್ತೆಗಳು, ಸರ್ವಿಸ್‌ ರಸ್ತೆಗಳು ಕಳೆದ ಮಳೆಗಾಲದಿಂದೀಚೆ ಬರಿಯ ಹಳ್ಳದಿಣ್ಣೆಗಳ ಕೊಂಪೆಯಾಗಿ ಮಾರ್ಪಟ್ಟಿರುವುದನ್ನು ಪ್ರತಿಯೊಬ್ಬರೂ ಕಂಡಿದ್ದೇವೆ, ಅದರಲ್ಲಿ ನಡೆದಾಡಲೂ, ವಾಹನಗಳಲ್ಲಿ ಸಂಚರಿಸಲೂ ಆಗದೆ ಪಾಡುಪಡುತ್ತಲೇ ಇದ್ದೇವೆ.

ಚೆನ್ನಾಗಿರುವ ರಸ್ತೆಗಳ ಮಧ್ಯಭಾಗದಲ್ಲೇ ಗುಂಡಿ ತೋಡಿ ಮ್ಯಾನ್‌ಹೋಲ್‌, ಚರಂಡಿ ಜಂಕ್ಷನ್‌ಗಳನ್ನು ಹೊಸದಾಗಿ ನಿರ್ಮಿಸುವ ಇಲ್ಲವೇ, ಹಳೆಯ ಚರಂಡಿಗಳಿಗೆ ಹೊಸ ಮ್ಯಾನ್‌ಹೋಲ್‌ಗಳಿಗೆ ಸಂಪರ್ಕ ನೀಡುವ ಕಾಮಗಾರಿ ತಿಂಗಳುಗಟ್ಟಲೆ ನಡೆದಿತ್ತು. ಈ ಕಾಮಗಾರಿಗಳ ಗುತ್ತಿಗೆ ಪಡೆದವರು ರಸ್ತೆ ಅಗೆಯಲು ತೆಗೆದುಕೊಂಡ ಉಮೇದು ಕಾಮಗಾರಿ ಮುಗಿದ ಬಳಿಕ ಗುಂಡಿಯನ್ನು ಸಮರ್ಪಕವಾಗಿ ಮುಚ್ಚಿ ಹಾಳಾದ ರಸ್ತೆಯನ್ನು ರಿಪೇರಿ ಮಾಡುವಲ್ಲಿ ತೋರಲಿಲ್ಲ.

ಇದರಿಂದಾಗಿ ಈ ರಸ್ತೆಗಳಲ್ಲಿ ಓಡಾಡುವುದು ದುಸ್ತರವಾಗಿದೆ. ಅರ್ಧಂಬರ್ಧ ಕೆಲಸ ಮಾಡಿ ಹೀಗೆ ಸಾರ್ವಜನಿಕರಿಗೆ ತೊಂದರೆ ಕೊಡುವ ಗುತ್ತಿಗೆದಾರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ನಮ್ಮ ಸ್ಥಳೀಯಾಡಳಿತಕ್ಕೆ ಅವಕಾಶವಿಲ್ಲವೇ?
–ರಮಣಿ, ಜೆ.ಪಿ.ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT