ADVERTISEMENT

ಅಸಲಿ ಮುಖ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST

ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯಲ್ಲಿರುವ 40 ಅಭ್ಯರ್ಥಿಗಳು ನಕಲಿ ಪ್ರಮಾಣಪತ್ರಗಳನ್ನು ನೀಡಿರುವುದು ವರದಿಯಾಗಿದೆ (ಪ್ರ.ವಾ., ಜುಲೈ 11).

ಪರಿಶೀಲನಾ ಹಂತದ ಅಧಿಕಾರಿಗಳ ಕಾರ್ಯಕ್ಷಮತೆಯಿಂದ ನಕಲಿಗಳು ಸಿಕ್ಕಿಬಿದ್ದಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧಪಡಿಸಿದ ಕಠಿಣ ಮಾದರಿಯ ಮೂರು ವಿಷಯಗಳ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ತೆಗೆದುಕೊಂಡ ಅಭ್ಯರ್ಥಿಗಳಷ್ಟೇ ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರೆ. ಹಾಗಾದರೆ ಈ ನಕಲಿ ಪ್ರಮಾಣಪತ್ರ ಹೊಂದಿದವರು ಹೇಗೆ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆಯಲು ಸಾಧ್ಯವಾಯಿತು?

ಹುದ್ದೆಯ ಸಾಮಾನ್ಯ ಅರ್ಹತೆಯ ಮಾನದಂಡಗಳಾದ ಸ್ನಾತಕೋತ್ತರ ಪದವಿ, ಎನ್.ಇ.ಟಿಗಳನ್ನೇ ನ್ಯಾಯಯುತ ಮಾರ್ಗದಲ್ಲಿ ಗಳಿಸಲಾಗದವರು ಕಠಿಣವಾದ ಬಹು ಆಯ್ಕೆ ಮಾದರಿಯ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆಯಲು ಬಳಸಿದ ತಂತ್ರವೇನು? ಈ ಪರೀಕ್ಷೆಯಲ್ಲೂ ಅಕ್ರಮಗಳು ನಡೆದಿವೆ ಎಂದು ಭಾವಿಸಬೇಕೇ?

ADVERTISEMENT

ನಾನು ಒಬ್ಬ ಅಭ್ಯರ್ಥಿಯಾಗಿ ಮೈಸೂರಿನ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆಗೆ ಹಾಜರಾಗಿದ್ದೆ. ಆ ಸಮಯದಲ್ಲಿ ಕೆಲವು ಅಭ್ಯರ್ಥಿಗಳು ಮಾತನಾಡಿಕೊಳ್ಳುತ್ತಿದ್ದಂತೆ,  ಪ್ರಭಾವಿಗಳಾದ ಕೆಲವರು ಉತ್ತರಗಳನ್ನು ದಾಖಲಿಸಬೇಕಾದ ಒ.ಎಂ.ಆರ್. ಹಾಳೆಗಳಲ್ಲಿ ಏನನ್ನೂ ತುಂಬದೆ ಮೇಲ್ವಿಚಾರಕರಿಗೆ ಖಾಲಿ ಹಾಳೆಗಳನ್ನೇ ನೀಡುತ್ತಾರೆ. ಮುಂದೆ ಅಲ್ಲಿಂದ ಮೌಲ್ಯಮಾಪನಕ್ಕೆ ಹೋಗುವ ಮೊದಲು ಪೂರ್ವನಿರ್ಧರಿತ ವ್ಯಕ್ತಿಗಳ ಖಾಲಿ ಒ.ಎಂ.ಆರ್. ಹಾಳೆಯಲ್ಲಿ ಸರಿ ಉತ್ತರಗಳನ್ನು ಭರ್ತಿ ಮಾಡಿಸುವ ಮೂಲಕ ಗರಿಷ್ಠ ಅಂಕ ದೊರಕುವಂತೆ ಮಾಡಿ ಅಂತಿಮ ಸುತ್ತಿಗೆ ಆಯ್ಕೆಯಾಗುತ್ತಾರಂತೆ.

ಆದ್ದರಿಂದ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆಗಳನ್ನಷ್ಟೇ ಪರಿಶೀಲಿಸದೆ ಅವರು ಪರೀಕ್ಷೆ ಬರೆದ ಕೇಂದ್ರಗಳ ವಿವರಗಳನ್ನೂ, ಅಲ್ಲಿ ನಡೆದಿರಬಹುದಾದ ಅವ್ಯವಹಾರದ ಸಾಧ್ಯತೆ ಬಗ್ಗೆಯೂ ತನಿಖೆ ಮಾಡಬೇಕು.
-ಡಾ. ರೋಹಿಣಾಕ್ಷ ಶಿರ್ಲಾಲು, ಪುತ್ತೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.