ADVERTISEMENT

ಇಬ್ಬಗೆ ನೀತಿ

ಪ್ರವೀಣ್ ಎಸ್ ಶೆಟ್ಟಿ ಮಂಗಳೂರು
Published 17 ಏಪ್ರಿಲ್ 2015, 19:30 IST
Last Updated 17 ಏಪ್ರಿಲ್ 2015, 19:30 IST

ದೊಡ್ಡ ದೇವಸ್ಥಾನಗಳಲ್ಲಿ ನೂರಾರು ವರ್ಷಗಳಿಂದ ಶೇಖರವಾಗಿರುವ ಟನ್ನುಗಟ್ಟಲೆ ಚಿನ್ನವನ್ನು ಕೇಂದ್ರ ಸರ್ಕಾರ ಬ್ಯಾಂಕುಗಳಲ್ಲಿ ಠೇವಣಿ ಇರಿಸಿ, ಅದರ ಬದಲು ದೇವಸ್ಥಾನಗಳಿಗೆ ಸುವರ್ಣ ಸರ್ಟಿಫಿಕೇಟ್ ಕೊಡಲು ಯೋಜಿಸುತ್ತಿದೆ. ಇದರಿಂದ  ಭಾರಿ ಚಿನ್ನದ ದಾಸ್ತಾನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ, ಚಿನ್ನದ ಆಮದು ಕಡಿಮೆ ಮಾಡುವ ಉದ್ದೇಶ ಇದೆ.

ಇನ್ನೊಂದೆಡೆ ಇದೇ ನರೇಂದ್ರ ಮೋದಿ ನೇತೃತ್ವದ ಸರ್ಕಾರ, ಅಕ್ಷಯ ತೃತೀಯದ ಹಿನ್ನೆಲೆಯಲ್ಲಿ ರಾಷ್ಟ್ರ ಲಾಂಛನವುಳ್ಳ ಚಿನ್ನದ ನಾಣ್ಯಗಳನ್ನು ಬಿಡುಗಡೆ ಮಾಡಿ ರಾಷ್ಟ್ರೀಯ ಬ್ಯಾಂಕುಗಳಲ್ಲಿ ಮಾರಾಟಕ್ಕೆ ಇಟ್ಟಿದೆ. ಈ ಮೂಲಕ ಚಿನ್ನ ಶೇಖರಣೆಗೆ ಜನರಿಗೆ ನೇರ ಪ್ರೋತ್ಸಾಹ ಕೊಡುತ್ತಿದೆ. ಇಂತಹ ವೈರುಧ್ಯದ ನೀತಿ ವಿಷಾದನೀಯ.

ಅಕ್ಷಯ ತೃತೀಯ ಕೇವಲ 8– 10 ವರ್ಷಗಳ ಹಿಂದೆ ಆರಂಭವಾದ ಮೂಢನಂಬಿಕೆ.  ಸರ್ಕಾರದ ಇಲಾಖೆಗಳು ಅಥವಾ ಸರ್ಕಾರಿ ಸಂಸ್ಥೆಗಳು ನೇರವಾಗಿ  ಮೂಢನಂಬಿಕೆಗೆ ಪ್ರೋತ್ಸಾಹ ಕೊಡುವುದನ್ನು ಸಂವಿಧಾನದಲ್ಲಿ ನಿಷೇಧಿಸಲಾಗಿದೆ.  ಹಾಗಾಗಿ ಕೇಂದ್ರ ಸರ್ಕಾರ ಅಕ್ಷಯ ತೃತೀಯದ ಹೆಸರಿನಲ್ಲಿ ಚಿನ್ನದ ನಾಣ್ಯ ಮಾರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು.

ಮೂಢನಂಬಿಕೆಗಳ ವಿರುದ್ಧ ಬಸವಣ್ಣ ಬಹಿರಂಗ ಸಮರ ಸಾರಿದ್ದರು. ಈಗ ಅದೇ ಬಸವೇಶ್ವರ ಜಯಂತಿಯಂದು ಬ್ಯಾಂಕುಗಳಿಗೆ ರಜೆಯಿದ್ದರೂ, ಅಕ್ಷಯ ತೃತೀಯದ ಕಾರಣಕ್ಕೆ ಚಿನ್ನದ ನಾಣ್ಯ ಮಾರಲು ಬ್ಯಾಂಕುಗಳನ್ನು ಆ ದಿನ ತೆರೆದಿಡಬೇಕೆಂದು ಸರ್ಕಾರ ಆದೇಶ ಹೊರಡಿಸಿದೆ. ಇದು ಮೌಢ್ಯ ವಿರೋಧಿ ಬಸವೇಶ್ವರರಿಗೆ ಮಾಡುತ್ತಿರುವ  ಅವಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.