ADVERTISEMENT

ಒಪ್ಪಲಾಗದು

​ಪ್ರಜಾವಾಣಿ ವಾರ್ತೆ
Published 26 ಜುಲೈ 2017, 19:30 IST
Last Updated 26 ಜುಲೈ 2017, 19:30 IST

‘ಪ್ರಜಾವಾಣಿ’ಯ ಅಭಿಮತ ಪುಟದಲ್ಲಿ ಪ್ರಕಟವಾದ ಡಾ.ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ‘ವೀರಶೈವ– ಲಿಂಗಾಯತ ಒಂದೇ– ಹಿಂದುವೂ ಹೌದು’ ಎಂಬ ಲೇಖನಕ್ಕೆ (ಜುಲೈ 19) ನನ್ನ ಪ್ರತಿಕ್ರಿಯೆ.

ಈ ಲೇಖನ ಅಭ್ಯಾಸಪೂರ್ಣವಾಗಿದೆ. ಆದರೆ ಅವರು ಲಿಂಗಾಯತ ಧರ್ಮವು ವೀರಶೈವದ ಮೂಲ ಹೊಂದಿದೆ ಎಂದು ಹೇಳಿರುವುದು ಒಪ್ಪುವಂಥ ವಿಷಯವಲ್ಲ. ಬಸವಣ್ಣನವರು ಸನಾತನ ಧರ್ಮದ ಕಟ್ಟಳೆಗಳನ್ನು ಧಿಕ್ಕರಿಸಿ, ಲಿಂಗಾಯತ ಧರ್ಮವನ್ನು ಸ್ಥಾಪಿಸಿದ್ದಾರೆ.

ಬಸವಾದಿ ಶರಣರು ವೇದಾಗಮಗಳ ಉಲ್ಲೇಖ ಮಾಡಿದ್ದರೂ, ಅವರ ವಚನಗಳು ಸರಳ ಧರ್ಮಾಚರಣೆಯ ಮಾರ್ಗಗಳಾಗಿವೆ. ಬಸವಣ್ಣನವರೇ ವೇದಗಳನ್ನು ಖಂಡಿಸಿ ಅನುಭವ ಮಂಟಪದ ಮೂಲಕ ಸ್ತ್ರೀಯರಿಗೂ ಸಮಾನ ಅವಕಾಶ ಕಲ್ಪಿಸಿದರು.

ADVERTISEMENT

ಶಿಕ್ಷಣದಿಂದ ವಂಚಿತರಾದ ಸ್ತ್ರೀಯರು ಸಹ ವಚನಗಳನ್ನು ರಚಿಸಲು ಸಾಧ್ಯವಾಗುವಷ್ಟು ಶಕ್ತಿ ತುಂಬಿದರು. ದಾಸೋಹದ ಮೂಲಕ ಜನರ ಹಸಿವು ನೀಗಿಸಿದರು.

ಸನಾತನ ಧರ್ಮದ ಪುರೋಹಿತಶಾಹಿಯನ್ನು ತಿರಸ್ಕರಿಸಿದರು. ವಚನಗಳು ಸಾಮಾನ್ಯರಿಗೆ ಅಧ್ಯಾತ್ಮದ ದಾರಿ ದೀಪಗಳಾದವು. ಕಾಯಕವೇ ಕೈಲಾಸವೆಂದ ಶರಣರು, ಪೂಜಾರಿಗಳ ಹಂಗು ತೊರೆದರು. ಅಂಗದ ಮೇಲೆ ಲಿಂಗ ಧರಿಸಿದವರೆಲ್ಲರೂ ಶರಣರು, ಲಿಂಗವಂತರೆಂದು ಪರಿಗಣಿಸಿದರು.

ಸಮಾಜದ ಕೆಳ ವರ್ಗದವರಾದ ಅಂಬಿಗ, ಮಡಿವಾಳ, ಕುಂಬಾರ, ಮಾದಾರ ಮುಂತಾದ ಜಾತಿ ವರ್ಗದವರಿಗೆ ಅನುಭವ ಮಂಟಪದಲ್ಲಿ ಸಮಾನ ಅವಕಾಶ ಕಲ್ಪಿಸಿದರು.

ಸ್ಥಾವರಕ್ಕೆ ಅಳಿವುಂಟೆಂದು ಗುಡಿ ಗುಂಡಾರಗಳಿಗೆ ಜೋತು ಬೀಳುವುದನ್ನು ತಪ್ಪಿಸಿದರು. ಅಲ್ಲಮಪ್ರಭುವನ್ನು ಅನುಭವ ಮಂಟಪದ ಅಧ್ಯಕ್ಷನಾಗಿಸಿದರು. ಅಕ್ಕಮಹಾದೇವಿ, ಮುಕ್ತಾಯಕ್ಕರಂಥ ಮಹಾ ಶಿವಶರಣೆಯರಿಗೆ ಗೌರವ ನೀಡಿದರು. ಹೀಗಾಗಿ ಲಿಂಗಾಯತ ಧರ್ಮ ಸರ್ವಸಮ್ಮತ.

ಆದರೆ ವೀರಶೈವವು ಸನಾತನ ಧರ್ಮದ ಗುಣಲಕ್ಷಣ ಹೊಂದಿದೆ. ಪುರೋಹಿತಶಾಹಿ ಸಂಸ್ಕೃತಿ ಇದೆ. ವೇದಾಗಮಗಳಿಗೆ ಜೋತು ಬಿದ್ದಿದೆ. ಕಿರೀಟ ಪೀಠಗಳಿಗೆ ಮಾನ್ಯತೆಯಿದೆ. ಶ್ರೇಣೀಕರಣ ಇದೆ. ಹೀಗಾಗಿ ವೀರಶೈವವು ಹಿಂದೂ ಜೀವನ ಶೈಲಿಗೆ ಸಮೀಪವಾಗಿದೆ. ಜೈನ, ಸಿಖ್‌ಗಳಂತೆ ಲಿಂಗಾಯತವೂ ಸ್ವತಂತ್ರ ಧರ್ಮವಾಗಿದೆ.

ಸಂಗಪ್ಪ ಎನ್. ಗಾಣಿಗೇರ, ಬಾಗಲಕೋಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.