ADVERTISEMENT

ಕಸ: ಜಾಗೃತಿ ಮೂಡಲಿ

ಮೋಹನ್ ದಾಸ್ ಶೆಟ್ಟಿ, ಬೆಂಗಳೂರು
Published 30 ನವೆಂಬರ್ 2015, 19:59 IST
Last Updated 30 ನವೆಂಬರ್ 2015, 19:59 IST

ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಲ್ಬಣಿಸಿರುವ ಬಗ್ಗೆ ಬಹಳಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ಕಸ ಪ್ರತ್ಯೇಕಿಸಿ ಕೊಡದಿದ್ದರೆ ದಂಡ, ಜೈಲು, ಕಸದ ಪುನರ್ಬಳಕೆ ಇತ್ಯಾದಿ.

ಈ ರಗಳೆಯೇ ಬೇಡ ಎಂದು ಕೆಲವರು ಮನೆ ಕಸ, ಕಚೇರಿ ಕಸವನ್ನು ಕಾಲುದಾರಿಯ ಮೇಲೂ, ರಸ್ತೆಯ ಮೇಲೂ ಬಿಸಾಕುತ್ತಿದ್ದಾರೆ. ಇನ್ನು ಕೆಲವರು ಮನೆ ಕೆಲಸದವರ ಕೈಯಲ್ಲಿ ಕೊಡುತ್ತಾರೆ. ಅವರು ಯಾರದೋ ಮನೆ ಮುಂದೆ ಬಿಸಾಡಿ ಹೋಗುತ್ತಾರೆ. ಇನ್ನು ರಾತ್ರಿ ಹೊತ್ತು ಬೇರೆ ಮನೆಯವರ ಮುಂದೆ ಕಸ ಬಿಸಾಕುವವರ ಒಂದು ವರ್ಗವೇ ಇದೆ. ತಳ್ಳು ಗಾಡಿಯವರೂ ಗಾಡಿಯ ಸುತ್ತ ಮುಚ್ಚಿರುವುದಿಲ್ಲವಾದ್ದರಿಂದ ಯಾರಿಗೂ ತಿಳಿಯದಂತೆ ಕಸವನ್ನು ಬೀಳಿಸಿಕೊಂಡು ಹೋಗುತ್ತಾರೆ. ಇವರನ್ನೆಲ್ಲ ಯಾವ ರೀತಿ ಹತ್ತಿಕ್ಕಬಹುದೆಂದು ಪಾಲಿಕೆ ಚಿಂತಿಸಬೇಕಾಗಿದೆ.

ಇದಕ್ಕೆಲ್ಲ ಮುಖ್ಯ ಕಾರಣ ಕಸದ ಗಾಡಿ ದಿನಾ ಬರದಿರುವುದು. ತೋಟದ ಕಸವನ್ನಂತೂ ಮುಟ್ಟುವವರೇ ಇಲ್ಲ. ಗೊಬ್ಬರ ಮಾಡುವ ವ್ಯವಸ್ಥೆ ಎಲ್ಲ ಮನೆಯಲ್ಲೂ ಇರದು. ಗುತ್ತಿಗೆದಾರರ ಕಡೆಯವ ‘ದುಡ್ಡು ಕೊಟ್ಟು ತೆಗೆಸಿ ಸಾರ್’ ಎನ್ನುತ್ತಾನೆ. ಕೇವಲ ಕರಪತ್ರ ಮತ್ತು ಸಂಚಾರಿ ವಾಹನಗಳ ಮೂಲಕ ಜನಜಾಗೃತಿ ಮೂಡಿಸುವುದು ಹೆಚ್ಚು ಪರಿಣಾಮಕಾರಿಯಲ್ಲ. ಹೀಗಾಗಿ ಚುನಾವಣೆ ಪ್ರಚಾರದ ಸಮಯದಲ್ಲಿ ಮಾಡುವಂತೆ ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಮನೆಮನೆಗೆ ಹೋಗಿ ಕಸ ವಿಂಗಡಣೆಯ ಬಗ್ಗೆ ಜನಜಾಗೃತಿ ಮೂಡಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.