ADVERTISEMENT

ಕಾಲದ ಅವಶ್ಯಕತೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 19:30 IST
Last Updated 13 ಸೆಪ್ಟೆಂಬರ್ 2017, 19:30 IST

ಬಸವಾದಿ ಶಿವಶರಣರ ತತ್ವಾದರ್ಶಗಳಾದ ‘ಜಾತಿ ಭೇದಗಳ ಹಂಗಿಲ್ಲದ, ಪರಸ್ಪರ ವಿವಾಹಾದಿ ಕೊಡಕೊಳ್ಳುವಿಕೆಯ ಮೂಲಕ ಸಮಾನತೆಯನ್ನು ಸಾಧಿಸುವ, ಕಳಲೊಲ್ಲದ, ಕೊಲಲೊಲ್ಲದ, ಹುಸಿಯ ನುಡಿಯಲೊಲ್ಲದ, ಕೀಳರಿಮೆ ಅಗ್ಗಳಿಕೆಗಳಿಲ್ಲದ, ಪರಸತಿಯರನೊಲ್ಲೆನೆಂಬ, ಪರದ್ರವ್ಯವನೊಲ್ಲೆನೆಂಬ, ಹೋಮ, ಹವನ, ಪೂಜೆ, ದೇವಸ್ಥಾನಗಳನೊಲ್ಲದ, ಏಕ ದೇವಾರಾಧನೆಯ, ಪರಶಿವನ ಲಿಂಗರೂಪವನ್ನು ಅಂಗೈಯಲ್ಲಿಟ್ಟು ಪೂಜಿಸುವ, ದೇಹವೇ ದೇವಾಲಯವೆನ್ನುವ, ತನ್ಮೂಲಕ ಜಾತ್ರೆ, ರಥೋತ್ಸವ, ಕಾರ್ಣಿಕಗಳನ್ನೂ ಆಚರಿಸದೆ ಕಾಯಕವೇ ಕೈಲಾಸವೆನ್ನುವ’ ಒಂದು ಬೃಹತ್‌ ಸಮುದಾಯ ಈಗ ಭಾರತಕ್ಕೆ ಅತ್ಯವಶ್ಯಕವಾಗಿ ಬೇಕಾಗಿದೆ.

ಆ ಸಮುದಾಯ ‘ಲಿಂಗಾಯತ’ ಎಂಬ ಹೊಸ ಧರ್ಮದ ಹೆಸರಿನಲ್ಲಿ ಬರುವುದಾದರೆ ಅದಕ್ಕೆ ವಿರೋಧವೇಕೆ? ಪರ–ವಿರೋಧಗಳ ಹುಯಿಲೇಕೆ. ಜಾತಿಭೇದವಿಲ್ಲದ, ಸಂಪೂರ್ಣ ಸಮಾನತೆಯ ‘ಲಿಂಗಾಯತ’ ಧರ್ಮ ಸಂಘಟಿತವಾದರೆ, ಬೇರೆ ಧರ್ಮಗಳಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲಾರದೆ ಇರುವವರೂ ಸೇರಿ ಮಾನವತೆಯುಳ್ಳ ಎಲ್ಲರೂ ‘ಉಘೇ’ ಎನ್ನಬೇಕು.

ಅಂತಹ ಸಮುದಾಯದ ಬಯಕೆ ಬರೆ ‘ಅಲ್ಪಸಂಖ್ಯಾತ’ವೆಂಬ ಹಣೆಪಟ್ಟಿ ಕಟ್ಟಿಕೊಂಡು ‘ಅಹಿಂದ’ವನ್ನು ಬಲಪಡಿಸುವ ರಾಜಕೀಯ ನಡೆಯೆಂದು ಏಕೆ ಅಂದುಕೊಳ್ಳಬೇಕು? ಪ್ರಭಾವಿ ರಾಜಕಾರಣಿಗಳ ಹಿಂದೆ ಮುಂದೆ ಮುಸುರುವ ಕಾವಿಧಾರಿಗಳನ್ನು ಬಿಟ್ಟು ನಿಜವಾದ ಸಹಜ ಶರಣರನ್ನು ಒಳಗೊಂಡ ‘ಲಿಂಗಾಯತ’ ಧರ್ಮ ಅಷ್ಟರಮಟ್ಟಿಗಾದರೂ ಜಾತಿ ಭೇದವನ್ನು ತೊಲಗಿಸಲು ಬೇಕಾಗಿದೆ. ಇದು ಕಾಲದ ಅವಶ್ಯಕತೆ. ಶಿವಶರಣರ ಆತ್ಮಗಳಿಗೂ ಶಾಂತಿ ಸಿಕ್ಕೀತು. ಹೊಸ ಲಿಂಗಾಯತ ಧರ್ಮಕ್ಕೆ ಜಯವಾಗಲಿ.

ADVERTISEMENT

–ಎಸ್‌.ಆರ್‌. ಮಹಾಬಲರಾವ್‌, ಕುಮಾರಪಟ್ಟಣಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.