ADVERTISEMENT

ಕೆಲವರಿಗಷ್ಟೇ ಅನ್ವಯ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2017, 19:30 IST
Last Updated 13 ಸೆಪ್ಟೆಂಬರ್ 2017, 19:30 IST

‘ನಮ್ಮ ಸಂವಿಧಾನ: ನಿಮಗೆಷ್ಟು ಗೊತ್ತು’? ಸರಣಿಯ ಲೇಖನಗಳು ಶತಕ ದಾಟಿವೆ. ಸಂತೋಷಕರ ವಿಷಯ. ಶುಭಾಶಯಗಳು.

ಸಂವಿಧಾನದ ವಿಧಿಗಳ ಬಗ್ಗೆ ಸಾಮಾನ್ಯ ಜನರಿಗೂ ತಿಳಿಯುವಂತೆ ಮಾಡಿದ್ದೀರಿ. ಸ್ವಾಗತಾರ್ಹ.

ಕಾನೂನುಗಳು ಇರುವುದೇ ಒಂದು, ಆಗುತ್ತಿರುವುದೇ ಒಂದು. ಜನಸಾಮಾನ್ಯರಿಗೆ ಮಾತ್ರ ಕಾನೂನು ಅನ್ವಯವಾಗುವುದು. ರಾಜಕಾರಣಿಗಳಿಗೆ, ಶ್ರೀಮಂತರಿಗೆ, ಪ್ರಭಾವಿ ವ್ಯಕ್ತಿಗಳಿಗೆ ಸಂವಿಧಾನದತ್ತ ಕಾನೂನು–ಕಟ್ಟಳೆಗಳು ಮೂಲೆಯಲ್ಲಿ ಕಾಲು ಮುರಿದುಕೊಂಡು ಬಿದ್ದಿವೆ. ಇದು ಎಲ್ಲರಿಗೂ ತಿಳಿದ ವಿಷಯ. ಆದರೆ ಜನಸಾಮಾನ್ಯ, ಬಡಬೋರೇಗೌಡ ಹಲ್ಲು ಕಿತ್ತ ಹಾವಿನಂತಾಗಿದ್ದಾರೆ. ನ್ಯಾಯ ಎಂಬುದು ಮರೀಚಿಕೆ ಆಗಿದೆ.

ADVERTISEMENT

ಜನಸಾಮಾನ್ಯರು ಪೊಲೀಸರ ಜೊತೆ ವಾದಿಸಿದರೆ, ಯಾವುದೋ ಒಂದು ಸೆಕ್ಷನ್ ಪ್ರಕಾರ ಒದ್ದು ಒಳಗೆ ಹಾಕಿ ನರಳುವಂತೆ ಮಾಡುವರು. ಅದೇ ರಾಜಕಾರಣಿಯೊಬ್ಬ ಎ.ಸಿ.ಪಿ.ಗೆ ಕೆನ್ನೆಗೆ ಹೊಡೆದರೂ ಶಿಕ್ಷೆ ಇಲ್ಲ. ಪೊಲೀಸ್ ಇಲಾಖೆ, ಆಳುವವರ ಕೈಗೊಂಬೆ ಆಗಿದೆ. ಪೊಲೀಸ್ ಇಲಾಖೆಗೆ ‘ಸ್ವಾತಂತ್ರ’ ನೀಡಬೇಕು. ಪೊಲೀಸರು ನಿರ್ದಾಕ್ಷಿಣ್ಯವಾಗಿ ಕಾನೂನು ಪಾಲಿಸಬೇಕು.

ಒಂದು ಸಣ್ಣ ಘಟನೆ. ಒಮ್ಮೆ ನಾನು ಬ್ಯಾಂಕ್‌ಗೆ ಹೋಗಿದ್ದಾಗ ನಡೆದದ್ದು. ಒಬ್ಬ ವ್ಯಕ್ತಿ ಹೆಲ್ಮೆಟ್ ಇಲ್ಲದೆ, No Entryಯಲ್ಲಿ ಬಂದ. ಕಾನ್‌ಸ್ಟೆಬಲ್ ಒಬ್ಬರು ಆತನನ್ನು ನಿಲ್ಲಿಸಲು ಹೋದರು. ಆತ ವಾಹನ ನಿಲ್ಲಿಸದೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ. ಆಗ ಇನ್ನೊಬ್ಬ ಕಾನ್‌ಸ್ಟೆಬಲ್ ಆತನನ್ನು ಹಿಡಿದು ನಿಲ್ಲಿಸಿದ. ಇಬ್ಬರ ನಡುವೆ ವಾಗ್ವಾದ ಆಯಿತು. ಇನ್‌ಸ್ಪೆಕ್ಟರ್ ಬಳಿ ಕರೆದೊಯ್ದರು. ಆತ ಇನ್‌ಸ್ಪೆಕ್ಟರ್ ಜೊತೆಗೂ ವಾಗ್ವಾದ ನಡೆಸಿದ. ಆ ವ್ಯಕ್ತಿ ಯಾರ‍್ಯಾರಿಗೋ ಫೋನ್ ಮಾಡಿದ. ಸ್ವಲ್ಪ ಹೊತ್ತಿಗೆ ಓರ್ವ ಪುಢಾರಿ ಬಂದು ಇನ್‌ಸ್ಪೆಕ್ಟರ್ ಜೊತೆ ಮಾತನಾಡಿದ. ಆ ವ್ಯಕ್ತಿಯನ್ನು ಬಿಟ್ಟುಬಿಟ್ಟ. ಪಾಪ, ಆ ಇಬ್ಬರು ಕಾನ್‌ಸ್ಟೆಬಲ್‌ಗಳ ಮುಖ ನೋಡಬೇಕಾಗಿತ್ತು– ಇಂಗು ತಿಂದ ಮಂಗನಂತಾಗಿತ್ತು.

ಈಗ ಹೇಳಿ. ಪೊಲೀಸ್ ಇಲಾಖೆ, ಪುಢಾರಿ ಅಥವಾ ಕಾನೂನು. ಯಾರು ದೊಡ್ಡವರು? ಯಾವುದು ದೊಡ್ಡದು?

–ಎ.ಪಿ. ರಂಗನಾಥ್, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.