ADVERTISEMENT

ಕೇರಳ ಮಾದರಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST

ಸಿಬಿಎಸ್‌ಇ, ಐಸಿಎಸ್‌ಇ ಪಠ್ಯಕ್ರಮ ಬೋಧಿಸುವ ಶಾಲೆಗಳೂ ಸೇರಿದಂತೆ ಕೇರಳ ರಾಜ್ಯದ ಎಲ್ಲ ಶಾಲೆಗಳಲ್ಲಿ ಬರುವ ಶೈಕ್ಷಣಿಕ ವರ್ಷದಿಂದ 10ನೇ ತರಗತಿವರೆಗೆ ಮಲಯಾಳಂ ಕಡ್ಡಾಯಗೊಳಿಸಿ ಕೇರಳ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿರುವುದಾಗಿ ವರದಿಯಾಗಿದೆ (ಪ್ರ.ವಾ., ಏ. 12).

ತಮಿಳುನಾಡಿನಲ್ಲಿ ಈ ಸಂಬಂಧ ಈಗಾಗಲೇ ಕಾನೂನನ್ನೇ ಮಾಡಲಾಗಿದೆ. ತಮಿಳು ಅಲ್ಲಿ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಮೊದಲ ಭಾಷೆಯಾಗಿ ಇದ್ದೇ ಇದೆ. ರಾಜ್ಯ ಭಾಷೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಆ ರಾಜ್ಯಗಳ ಬದ್ಧತೆ ನಮಗೆ ಮಾದರಿಯಾಗಬೇಕು.

ನಮ್ಮಲ್ಲಿ 2014ರಲ್ಲಿ ಕಲಿಕಾ ಮಾಧ್ಯಮ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ಬಂದ ಮೇಲೆ ನಮ್ಮ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸಂವಿಧಾನ ತಿದ್ದುಪಡಿ ಮಾಡಲು ಕೋರಿ ಪತ್ರ ಬರೆದಿರುವುದನ್ನು ಬಿಟ್ಟರೆ ಹೆಚ್ಚಿನದೇನನ್ನೂ ಮಾಡಿಲ್ಲ.

ಸಂವಿಧಾನ ತಿದ್ದುಪಡಿಗೆ ಒತ್ತಡ ಹಾಕುವಷ್ಟು ಬಲ ಇಲ್ಲದಿದ್ದಲ್ಲಿ, ನಮ್ಮ ಸರ್ಕಾರ ಕೂಡ ತನ್ನ ಅಧಿಕಾರ ವ್ಯಾಪ್ತಿಯೊಳಗೆ ರಾಜ್ಯ ಭಾಷೆಯ ಹಿತಾಸಕ್ತಿ ಕಾಪಾಡಲು ನೆರೆಯ ರಾಜ್ಯಗಳಂತೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ. ನಾಡು–ನುಡಿ ಹಿತಾಸಕ್ತಿ ಕುರಿತು ರಾಜ್ಯ ಸರ್ಕಾರಕ್ಕೆ ತನ್ನದೇ ಆದ ಜವಾಬ್ದಾರಿ ಇರುತ್ತದೆ.

ನಮ್ಮಲ್ಲಿ ಹಲವಾರು ವರ್ಷಗಳಿಂದ ಕನ್ನಡವನ್ನು ಕಡ್ಡಾಯವಾಗಿ ಕಲಿಸಬೇಕೆಂಬ ಯಾವುದೇ ನಿರ್ಬಂಧ ಇಲ್ಲ. ಇಂತಹ ನಿರ್ಬಂಧ ಹಾಕದೆ  ಸಿಬಿಎಸ್‌ಇ, ಐಸಿಎಸ್‌ಇ  ಶಾಲೆಗಳನ್ನು ಆರಂಭಿಸಲು ನಿರಾಕ್ಷೇಪಣಾ ಪತ್ರಗಳನ್ನು ನೀಡುತ್ತ ಬರಲಾಗಿದೆ. ಹೀಗಾಗಿ ಅಂಥ ಬಹಳಷ್ಟು ಶಾಲೆಗಳಲ್ಲಿ ಕನ್ನಡ ಕಲಿಕೆ ಇಲ್ಲ. ಅಲ್ಲಿ ಕನ್ನಡ ಕಡ್ಡಾಯ ಮಾಡಲು ಈಗ ಸಕಾಲ.

ಕನ್ನಡೇತರ ಮಾಧ್ಯಮ ಶಾಲೆಗಳಲ್ಲಿ ನಮ್ಮಲ್ಲಿ ದ್ವಿತೀಯ ಭಾಷೆಯಾಗಿ ಕನ್ನಡ ಕಡ್ಡಾಯ ಇದೆ. ಆದರೆ ದ್ವಿತೀಯ ಭಾಷೆಯಾಗಿ ಕಲಿಯುವ ಅಥವಾ ಕಲಿಸುತ್ತಿರುವ ಕನ್ನಡ ಆ ದೇವರಿಗೇ ಪ್ರೀತಿ. ಅದು ನಮ್ಮ ಭಾಷೆಯ ಮೇಲೆ ಅಭಿಮಾನ ಹೆಚ್ಚಿಸುವ ಬದಲು ಕುಂಠಿತ ಗೊಳಿಸುವಂತಿರುತ್ತದೆ. ಅದ್ದರಿಂದ ಯಾವುದೇ ಮಾಧ್ಯಮ ಶಾಲೆಗಳಿರಲಿ ಕನ್ನಡವನ್ನು ತಮಿಳುನಾಡು ಮಾದರಿಯಲ್ಲಿ ಪ್ರಥಮ ಭಾಷೆಯಾಗಿ ಬೋಧಿಸುವಂತೆ ಕ್ರಮ ಜರುಗಿಸಲು ಚಿಂತಿಸಬಹುದಾಗಿದೆ.

ಸದ್ಯಕ್ಕೆ ನಮ್ಮ ರಾಜ್ಯ ಸರ್ಕಾರ ರಾಜ್ಯೋತ್ಸವ ಮತ್ತು ಕನ್ನಡ ಸಾಹಿತ್ಯ ಸಮ್ಮೇಳನಗಳ ಕಾಲಕ್ಕೆ ‘ಸರ್ಕಾರ ಕನ್ನಡ ಹಿತಕಾಯಲು ಬದ್ಧ’ ಎಂದು ಹೇಳುವುದನ್ನು ಬಿಟ್ಟರೆ ಹೆಚ್ಚಿನದೇನನ್ನೂ ಮಾಡುತ್ತಿಲ್ಲ. ಭಾಷಾ ವಿಷಯ ಮರೆತು ಹೋದ ಅಧ್ಯಾಯವಾಗಿದೆ. ಸರ್ಕಾರ  ಭಾಷೆ ಕುರಿತು ಸ್ವಲ್ಪ ಗಮನ ವಹಿಸಲಿ.
-ವೆಂಕಟೇಶ ಮಾಚಕನೂರ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.