ADVERTISEMENT

ಕೊಳೆಗೇರಿ ವಾಸ್ತವ್ಯ

ನಾಗೇಶ ಹೆಗಡೆ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಪ್ರತಿವರ್ಷ ಅಕ್ಟೊಬರ್ ಮೊದಲ ಸೋಮವಾರ (ಈ ವರ್ಷ ಅ. 5) ‘ವಿಶ್ವ ಆವಾಸ ದಿನ’ವನ್ನು ಆಚರಿಸಬೇಕೆಂದು ವಿಶ್ವಸಂಸ್ಥೆ ಘೋಷಿಸಿದೆ. ಮನುಷ್ಯನ ಅಭಿವೃದ್ಧಿಯ ದಾಂಗುಡಿಯಿಂದಾಗಿ ಪ್ರಪಂಚದ ಎಲ್ಲ ಜೀವಿಗಳ ವಾಸದ ಪರಿಸರವೂ ಧ್ವಂಸವಾಗುತ್ತಿದೆ.

ಮನುಷ್ಯರಲ್ಲೂ ಗ್ರಾಮೀಣ ಬದುಕು ದುಸ್ತರವಾಗಿ ನಗರದತ್ತ ವಲಸೆ ಅನಿವಾರ್ಯವಾಗುತ್ತಿದೆ. ಕೊಳೆಗೇರಿ ನಿವಾಸಿಗಳ ಬದುಕನ್ನು ತುಸು ಸಹನೀಯ ಮಾಡುವಂತೆ ವಿಶ್ವಸಂಸ್ಥೆಯ ಸೂಚನೆಯ ಪ್ರಕಾರ ಬಹಳಷ್ಟು ದೇಶಗಳು ‘ಆವಾಸ ದಿನ’ವನ್ನು ಆಚರಿಸಿವೆ. ಶ್ರೀಲಂಕಾ  ಅಂತೂ ಈ ಸಮಸ್ಯೆಯತ್ತ ತನ್ನವರ ಗಮನ ತಿರುಗಿಸಲು ವಾರವಿಡೀ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಮ್ಮಲ್ಲಿ ಅಂಥದ್ದೇನೂ ಇದ್ದಂತಿಲ್ಲ.

ನಮ್ಮ ದೇಶದ ಕೊಳೆಗೇರಿಗಳ ದುಃಸ್ಥಿತಿ ಇತರೆಲ್ಲ ದೇಶಗಳ ದಾಖಲೆಯನ್ನು ಮೀರಿಸುವಂತಿದೆ. ದಿನವೂ ಲಕ್ಷಗಟ್ಟಲೆ ಜನರು ನಗರ ಸೇರುತ್ತಿದ್ದಾರೆ. ಅವರಿಗೆ ವಾಸ್ತವ್ಯ, ನೀರು, ಬೆಳಕು, ರಸ್ತೆ, ಒಳಚರಂಡಿ, ಭದ್ರತೆ ಒದಗಿಸಬೇಕಾದ ಸರ್ಕಾರದ ಇಲಾಖೆಗಳು ನಮ್ಮಲ್ಲೂ ‘ಆವಾಸ ದಿನ’ವನ್ನು ಆಚರಿಸಬಹುದಿತ್ತು. 

ನನ್ನದೊಂದು ವಿನಂತಿ. ಈ ಇಲಾಖೆಗಳ ಸಚಿವರು ಹುಬ್ಬಳ್ಳಿ, ಕಲಬುರ್ಗಿ, ಮಂಗಳೂರು, ಮಂಡ್ಯ ಅಥವಾ ಬೆಂಗಳೂರಿನ ಯಾವುದಾದರೊಂದು ಕೊಳೆಗೇರಿಗೆ ಹೋಗಿ ವಾಸ್ತವ್ಯ ಮಾಡಿ ಬರಲಿ. ತಮ್ಮ ಎಂದಿನ ಪಟಾಲಂ ಬದಲು ಇಲಾಖೆಯ ಕಾರ್ಯದರ್ಶಿಯ ಜೊತೆಗೆ ಹೋಗಿ ಈ ವಾರದಲ್ಲಿ ಎಂದಾದರೊಮ್ಮೆ ನೋಡಿ ಬರಲಿ. ಪ್ರತಿ ನಗರದ ಸುತ್ತ ಬೆಳೆಯುತ್ತಿರುವ ಈ ಕತ್ತಲು ಖಂಡದತ್ತ ತುಸು ಲಕ್ಷ್ಯ ವಹಿಸುವವರು ಬೇಕಿದ್ದಾರೆ. ವಿಶ್ವಸಂಸ್ಥೆಯ ಕಾಯಂ ಸದಸ್ಯತ್ವ ಪಡೆಯಲು ನಮಗೆ ಅದರಿಂದ ಹೆಚ್ಚಿನ ನೈತಿಕ ಬಲವೂ ಬಂದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.