ADVERTISEMENT

ದಸರೆಗೆ ಶಿಸ್ತು ಅಗತ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST

ವಿಜಯನಗರ ಅರಸರ ಕಾಲದಲ್ಲಿ ಆರಂಭವಾದ ದಸರಾ ಉತ್ಸವ ಮೈಸೂರು ಅರಸರ ಕಾಲದಲ್ಲೂ ಮುಂದುವರಿದು, ಜಯಚಾಮರಾಜ ಒಡೆಯರ್‌ ಅವರ ಕಾಲದಲ್ಲಿ ವಿಶ್ವವಿಖ್ಯಾತಿ ಪಡೆಯಿತು.

ದಸರಾ ಅಂಬಾರಿ ಉತ್ಸವವನ್ನು ಅಂದು ‘ಫೌಜು’ ಎಂದೇ ಕರೆಯುತ್ತಿದ್ದರು. ‘ಫೌಜು’ ಎಂದರೆ ಸೈನ್ಯ ಎಂದು ಅರ್ಥ. ಸೈನ್ಯಕ್ಕೆ ಒಂದು ಶಿಸ್ತು ಇದೆ. ಜಯಚಾಮರಾಜ ಒಡೆಯರ್‌ ಅಂಬಾರಿಯಲ್ಲಿ ಕುಳಿತಿದ್ದ ಕೊನೆಯ ದಸರಾ ಉತ್ಸವವನ್ನು ನಾನು ನೋಡಿದ್ದೇನೆ. ಅಂತಹ ಶಿಸ್ತುಬದ್ಧ ದಸರಾ ಉತ್ಸವ ಇಂದು ಇಲ್ಲವಾಗಿದೆ.

ಆಡಂಬರ ಮತ್ತು ವೈಭವಗಳು ಇವೆಯಾದರೂ ಶಿಸ್ತುಬದ್ಧ ಪಥಸಂಚಲನ ಇಲ್ಲ. ಪಥಸಂಚಲನದ ನಡು ನಡುವೆ ಸಾರ್ವಜನಿಕರು, ವಿಡಿಯೊಗ್ರಾಫರ್ಸ್‌, ಛಾಯಾಗ್ರಾಹಕರು ಓಡಾಡುವುದರಿಂದ ಕಿರಿಕಿರಿಯಾಗುತ್ತದೆ. ಒಂದು ದೃಷ್ಟಿಯಿಂದ ನೋಡಿದರೆ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪರೇಡ್‌ ಹಾಗೂ ಮೈಸೂರಿನಲ್ಲಿ ನಡೆಯುವ ವಿಜಯದಶಮಿ ಉತ್ಸವ ಒಂದೇ.

ADVERTISEMENT

ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ದೇಶದ ಶಕ್ತಿಯ ಪ್ರದರ್ಶನವಾದರೆ, ದಸರಾ ಉತ್ಸವ ಕರ್ನಾಟಕದ ಪರಂಪರೆ, ಸಂಸ್ಕೃತಿಯ ಪ್ರತಿಬಿಂಬ. ಆದ್ದರಿಂದ ಪಥ ಸಂಚಲನದಲ್ಲಿ ಶಿಸ್ತಿಗೆ ಮಹತ್ವ ನೀಡಬೇಕು. ಆ ಮೂಲಕ ದಸರಾದ ವೈಭವ, ಘನತೆ ಹೆಚ್ಚಾಗಬೇಕು.
–ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.