ADVERTISEMENT

ದಾಸಿಮಯ್ಯ: ಗೊಂದಲ ನಿವಾರಿಸಿ

ಡಾ.ಎಸ್‌.ವಿದ್ಯಾಶಂಕರ, ಬೆಂಗಳೂರು
Published 19 ಫೆಬ್ರುವರಿ 2015, 19:30 IST
Last Updated 19 ಫೆಬ್ರುವರಿ 2015, 19:30 IST

ಕರ್ನಾಟಕ ಸರ್ಕಾರ, ದೇವರ ದಾಸಿಮಯ್ಯ ಜಯಂತಿಯನ್ನು ಕರ್ನಾಟಕದಾದ್ಯಂತ ಆಚರಿಸಲು ₨ 93 ಲಕ್ಷ ಹಣ ಬಿಡುಗಡೆ ಮಾಡಿದ ಸುದ್ದಿ ಪ್ರಕಟವಾಯಿತು. ಇದು ಜೇಡರ ದಾಸಿಮಯ್ಯನವರ ಜಯಂತಿಗೊ, ದೇವರ ದಾಸಿಮಯ್ಯನವರ ಜಯಂತಿಗೊ ತಿಳಿಯದು.
ಸರ್ಕಾರ ಕನ್ನಡ ವಿಶ್ವವಿದ್ಯಾಲಯ­ದಲ್ಲಿ ದೇವರ ದಾಸಿಮಯ್ಯ ಪೀಠ ಸ್ಥಾಪಿಸಿದೆ. ಬಹುಶಃ ಇವರ ಜಯಂತಿಯ ಆಚರಣೆಗೇ ಇರಬಹುದು ಹಣ ಬಿಡುಗಡೆ ಮಾಡಿರುವುದು.

ದೇವರ ದಾಸಿಮಯ್ಯ ಒಬ್ಬ ಶೈವ ಮತ ಪ್ರಚಾರಕ. ಜಯಸಿಂಹನ ಪತ್ನಿ ಸುಗ್ಗಳೆಯನ್ನು ಶೈವಮತಕ್ಕೆ ಪರಿವರ್ತಿಸಿದವನು. ಇಷ್ಟು ಬಿಟ್ಟರೆ ಇವನ ಬಗೆಗೆ ಏನೇನೂ ತಿಳಿಯದು.  ಒಂದು ಗುಂಪಿನ ಜನ ದೇವರ ದಾಸಿಮಯ್ಯ ಜೇಡರ ದಾಸಿಮಯ್ಯ ಒಬ್ಬರೇ ಎಂದು ವಾದಿಸುತ್ತಿರುವರು. ಇವರಿಬ್ಬರೂ ಬೇರೆ ಬೇರೆ ವ್ಯಕ್ತಿಗಳು ಎನ್ನುವುದಕ್ಕೆ ದಾಖಲೆಗಳಿವೆ. ಕಾಲದ ದೃಷ್ಟಿಯಿಂದ ದೇವರ ದಾಸಿಮಯ್ಯನು ಜೇಡರ ದಾಸಿಮಯ್ಯನಿಗಿಂತ ನೂರು ವರ್ಷ ಹಿಂದೆ ಇದ್ದವನು; ದೇವರ ದಾಸಿಮಯ್ಯ ಓರ್ವ ಮತ ಪ್ರಚಾರಕ; ಅವನು ವಚನಗಳನ್ನು ಬರೆದಿರುವುದಿಲ್ಲ; ಜೇಡರ ದಾಸಿಮಯ್ಯ ವೃತ್ತಿಯಲ್ಲಿ ನೇಕಾರ. ಅವನ ಹೆಸರಿನ ಮುಂದಿನ ವಿಶೇಷಣವೇ ಹೇಳುತ್ತದೆ ಅವನು ನೇಕಾರನೆಂಬುದನ್ನು.

ಇವನಂತೆ ಇವನ ಪತ್ನಿ ದುಗ್ಗಳೆಯೂ ವಚನಗಳನ್ನು ಬರೆದಿರುವಳು. ಸದ್ಯಕ್ಕೆ ಜೇಡರ ದಾಸಿಮಯ್ಯ ವಚನ ಸಾಹಿತ್ಯದ ಗರ್ಭಗುಡಿಯ ಮಂಗಳಮೂರುತಿ. ಗರ್ಭ­ಗುಡಿಯ ಬಾಗಿಲು ತೆಗೆದದ್ದೂ ಅವನೇ. ಹೀಗಿರುವಾಗ ಇಬ್ಬರೂ ಒಬ್ಬರೇ ಹೇಗಾಗು­ತ್ತಾರೆ? ದುಗ್ಗಳೆ ದೇವರ ದಾಸಿಮಯ್ಯನ ಪತ್ನಿ ಎನ್ನುವುದು– ಭಾವಿಸುವುದು ವಿರೋಧಾಭಾಸವಲ್ಲವೆ?

ಇವರಿಬ್ಬರೂ ಬೇರೆ ಬೇರೆ ವ್ಯಕ್ತಿಗಳು ಎಂಬುದನ್ನು ವಿಚಾರ ಮಾಡಬಲ್ಲ ಸಮಾನ ಮನಸ್ಕರು ಪತ್ರಿಕೆಗಳಲ್ಲಿ ಲೇಖನ ಬರೆದರು, ವಿಚಾರ ಸಂಕಿರಣ ನಡೆಸಿದರು, ಪತ್ರಿಕಾ­ಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು, ಸರ್ಕಾರಕ್ಕೆ ಪತ್ರ ಬರೆದರು. ಇವಾವಕ್ಕೂ ಸರ್ಕಾರ ಕಿವಿಗೊಡುತ್ತಿಲ್ಲ.  ವಿಚಾರವಂತ ಶಾಸಕರು ಈ ಬಗ್ಗೆ ಸರ್ಕಾರಕ್ಕೆ ತಿಳಿವಳಿಕೆ ನೀಡಿ ಸರ್ಕಾರದ ಮನವೊಲಿಸಿ ಆಗಿರುವ ತಪ್ಪನ್ನು ತಿದ್ದ­ಬಹುದು. ಈಗ ಸರ್ಕಾರ ಆಚರಿಸಬೇಕಾದದ್ದು ಕನ್ನಡದ ಆದ್ಯ ವಚನಕಾರ ಜೇಡರ ದಾಸಿಮಯ್ಯನ ಜಯಂತಿಯನ್ನು, ಕನ್ನಡಕ್ಕೆ ಏನೇನೂ ಕೊಡುಗೆ ನೀಡಿರದ ದೇವರ ದಾಸಿಮಯ್ಯನ ಜಯಂತಿಯನ್ನಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.