ADVERTISEMENT

ದ್ವಿಭಾಷಾ ಸೂತ್ರ ಬೇಡ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 19:30 IST
Last Updated 20 ಸೆಪ್ಟೆಂಬರ್ 2017, 19:30 IST

ಪ್ರೌಢ ಶಾಲಾ ಹಂತದಲ್ಲಿ ತ್ರಿಭಾಷಾ ಸೂತ್ರ ಕೈ ಬಿಟ್ಟು ದ್ವಿಭಾಷಾ ಸೂತ್ರ ಜಾರಿ ಮತ್ತು ಪದವಿ ಪೂರ್ವ ಹಂತದಲ್ಲಿ ಒಂದೇ ಭಾಷೆ ಕಲಿಕೆಗೆ ಶಿಕ್ಷಣ ಇಲಾಖೆ ಚಿಂತನೆ ನಡೆಸಿದೆ ಎಂಬ ಸುದ್ದಿ (ಪ್ರ.ವಾ., ಸೆ. 16) ಓದಿ ಆಶ್ಚರ್ಯವಾಯಿತು.

ಕಲಿಕೆಗೆ ಹೆಚ್ಚು ಸಮಯ ವ್ಯಯವಾಗುವುದು, ಕಲಿಕಾ ಸಾಮರ್ಥ್ಯದ ಮೇಲೆ ಪರಿಣಾಮವಾಗುವುದು ಎಂಬುದೆಲ್ಲ ಆಧಾರವಿಲ್ಲದ ವಾದಗಳು. ಎಲ್ಲಾ ವಿಷಯಗಳ ಕಲಿಕೆಗೆ ಭಾಷೆಯೇ ತಳಪಾಯ. ಇಲಾಖೆ ಯಾವುದೋ ಒಂದು ಭಾಷೆಯನ್ನು ಕಲಿಸಿ, ಮಕ್ಕಳ ಮಾತೃ ಭಾಷೆಗೇ ಕತ್ತರಿಹಾಕಲು ಹೊರಟಂತಿದೆ.

ಮಕ್ಕಳ ಭಾಷೆ ಕಲಿಕಾ ಸಾಮರ್ಥ್ಯ ಯಾವ ಹಂತದಲ್ಲಿ ಎಷ್ಟಿರುತ್ತದೆ ಎನ್ನುವುದನ್ನು ಭಾಷಾ ತಜ್ಞರಿಂದ ತಿಳಿದು ಈ ಬಗ್ಗೆ ನಿರ್ಧಾರಕ್ಕೆ ಬರಬೇಕು. ಶಿಕ್ಷಣ ತಜ್ಞ ಪಟ್ಟನಾಯಕ ಅವರು ತ್ರಿಭಾಷಾಸೂತ್ರ ವಿವರಿಸುತ್ತಾ, ‘ಮಗು ಮಾತೃಭಾಷೆ ಕಲಿಯಬೇಕು. ಪರಿಸರಜ್ಞಾನ ಅರಿಯಲು, ರಾಷ್ಟ್ರೀಯತೆ, ಸಾಮಾಜಿಕ ಪ್ರಜ್ಞೆ ಬೆಳೆಸಿಕೊಳ್ಳಲು ಮಗುವಿಗೆ ದೇಶಭಾಷೆ ಬೇಕು (ಅದು ಹಿಂದಿ). ತ್ರಿಭಾಷಾ ಪರಿಧಿಯಲ್ಲಿ ಒಂದು ವಿದೇಶಿ ಭಾಷೆ ಬೇಕು (ಅದು ಇಂಗ್ಲಿಷ್‌)’ ಎಂದಿದ್ದಾರೆ.

ADVERTISEMENT

ಹೀಗಿರುವಾಗ ನಾವು ಭಾಷೆಗಳನ್ನು ಸೀಮಿತಗೊಳಿಸಿ, ಮಗುವಿನ ಕಲಿಕೆಯ ಸಾಮರ್ಥ್ಯ ತಿಳಿಯದೆ, ಸಮಯ ಹಾಳಾಗುವುದೆನ್ನುವ ಕಾರಣಕ್ಕೆ ಭಾಷೆಗಳಿಂದ ಮಕ್ಕಳನ್ನು ದೂರ ಮಾಡಿದರೆ ಅವರ ಜ್ಞಾನಕ್ಕೆ ಬೇಲಿ ಹಾಕಿದಂತಲ್ಲವೇ?

ಇಂಗ್ಲಿಷ್‌ನಂತೆಯೇ ಹಿಂದಿ ಬೆಳೆದಿದೆ. ಅದರಿಂದ ಉದ್ಯೋಗ ಅವಕಾಶಗಳೂ ತೆರೆದುಕೊಂಡಿವೆ. ಆದರೆ ತಮಿಳರ ಧೋರಣೆ ಕಂಡು ಕೆಲವರು ದ್ವಿಭಾಷಾನೀತಿಯ ಬೆನ್ನು ಹತ್ತಿದ್ದಾರೆ. ಕನ್ನಡವು ತಮಿಳಿನಂತಲ್ಲ. ಇದರಲ್ಲಿ ಸಂಸ್ಕೃತ, ಉರ್ದು, ಪಾರ್ಸಿ, ಹಿಂದಿ, ಇಂಗ್ಲಿಷ್‌ ಪದಗಳು ಬಿಡಿಸಲಾಗದಂತೆ ಸೇರಿವೆ.

ಪದವಿ ಪೂರ್ವದಲ್ಲಿ ಒಂದೇ ಭಾಷೆ ಕಲಿಕೆಗೆ ಅವಕಾಶ ಕೊಟ್ಟರೆ ಮುಂದೆ ಮಾತೃಭಾಷೆ, ದೇಶಭಾಷೆ, ಸಂಪರ್ಕ ಭಾಷೆ ಮುಂತಾದವುಗಳಿಗೆ ಅರ್ಥವಿಲ್ಲದಂತಾಗುತ್ತದೆ. ಭಾಷೆ ಕಲಿಸುವ ಸಾವಿರಾರು ಶಿಕ್ಷಕರು ನಿರಾಶ್ರಿತರಾಗುತ್ತಾರೆ. ಮಕ್ಕಳು ಸಂಕುಚಿತರಾಗುತ್ತಾರೆ. ಆದ್ದರಿಂದ ಭಾಷಾ ಕಲಿಕೆಯ ಸೂಕ್ಷ್ಮತೆ, ಪ್ರಯೋಜನ ಅರಿತು ನಿರ್ಣಯ ತೆಗೆದುಕೊಳ್ಳಬೇಕು.
–ಡಾ. ಕೆ.ಬಿ.ಬ್ಯಾಳಿ, ಕುಕನೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.