ADVERTISEMENT

ಧರ್ಮ ರಾಜಕೀಯವಲ್ಲ!

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2018, 19:30 IST
Last Updated 26 ಏಪ್ರಿಲ್ 2018, 19:30 IST

‘ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಪ್ರತಿಪಾದನೆ ಕೇವಲ ರಾಜಕಾರಣವೇ?’ (ಚುನಾವಣಾ ಪಯಣ, ಪ್ರ.ವಾ., ಏ. 25) ತಲೆಬರಹದ ಸಂದರ್ಶನದಲ್ಲಿ ರಂಭಾಪುರಿ ಸಂಸ್ಥಾನ ಶಾಖಾ ಮಠದ ಓಂಕಾರೇಶ್ವರ ಸ್ವಾಮೀಜಿ ಎತ್ತಿರುವ ಕೆಲವು ಸಂದೇಹಗಳಿಗೆ ಉತ್ತರಿಸಬೇಕಾದದ್ದು ಒಬ್ಬ ಲಿಂಗಾಯತನ ಕರ್ತವ್ಯ ಎಂದು ನಾನು ಬಗೆದಿದ್ದೇನೆ.

‘ಸಿದ್ದರಾಮಯ್ಯ ಅವರು ಧರ್ಮ ಒಡೆದರು’ ಎಂಬ ಆಪಾದನೆಯೇ ಹುಸಿ. ‘ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇಬ್ಬರು ಸಚಿವರನ್ನು ಬಳಸಿಕೊಂಡರು’ ಎಂಬ ಮಾತು ಸತ್ಯವೋ ಅಸತ್ಯವೋ ಅನ್ನುವುದಕ್ಕಿಂತ, ಇದರಿಂದ ತಾತ್ವಿಕ ಲಿಂಗಾಯತರಿಗಂತೂ ಒಳ್ಳೆಯದೇ ಆಗಿದೆ ಎಂಬುದು ಮುಖ್ಯ.

ಮೂಲತಃ ವಿರಕ್ತ ಮತ್ತು ಪಂಚಾಚಾರ್ಯ ಪರಂಪರೆಗೆ ಜಾತಿ ಜಂಗಮರು ಮಠಾಧಿಪತಿಗಳಾದುದು ಈ ಎಲ್ಲಾ ಗಂಡಾಂತರಗಳಿಗೆ ಕಾರಣವಾಗಿದೆ. ಅವರು ಬಸವಾದಿ ಶರಣರ ವಿಚಾರಗಳಿಗೆ ಬಹು ದೊಡ್ಡ ಕಂಟಕವಾಗಿದ್ದಾರೆ.

ADVERTISEMENT

‘ಜಾತಿಯಿಂದ ವ್ಯಕ್ತಿ ಶ್ರೇಷ್ಠ– ಕನಿಷ್ಠನಾಗುತ್ತಾನೆ’ ಎಂಬ ವಿಚಾರದ ಓಂಕಾರೇಶ್ವರ ಸ್ವಾಮೀಜಿಯ ಮಾತುಗಳು ಬೂರ್ಜ್ವ ತತ್ವದ ಪಳೆಯುಳಿಕೆ. ಗುರು ಲಿಂಗ ಜಂಗಮ ಎಂಬುದು ವ್ಯಕ್ತಿ ಹೇಗೋ ಹಾಗೆಯೇ ತತ್ವ ಕೂಡ. ಸ್ಥಾವರ ಗುಡಿಗಳು ಅಸಮಾನತೆ, ಶೋಷಣೆಗಳಿಗೆ ಕಾರಣವಾಗಿರುವುದು ಸುಳ್ಳೇ? ಬಹಿರಂಗ ಕ್ರಿಯೆಗಿಂತ ಅಂತರಂಗದ ಆಚರಣೆಗಳು ಬಹಳ ಮುಖ್ಯ. ಇದನ್ನು ಪಂಚಾಚಾರ್ಯ ಪರಂಪರೆಯ ಸ್ವಾಮಿಗಳು ಮುದ್ದಾಂ ಮರೆಯಿಸುತ್ತಿದ್ದಾರೆ. ಇದು ಖಂಡನೀಯ.

ಬಹಳಷ್ಟು ಜನ ಪ್ರಜ್ಞಾವಂತ ಲಿಂಗಾಯತರಿಗೆ ಸಚಿವರಾದ ಎಂ.ಬಿ. ಪಾಟೀಲ ಮತ್ತು ವಿನಯ ಕುಲಕರ್ಣಿ ಮಾದರಿ ಅಲ್ಲ. ಅವರೂ ಬಸವಾದಿ ಶರಣರ ತತ್ವವನ್ನು ಇನ್ನೂ ಸರಿಯಾಗಿ ಅರಿತಿಲ್ಲ. ಆದರೆ ಬಹಳಷ್ಟು ಜನ ಆ ಕಡೆ ಮುಖ ಮಾಡಿ ಕುಳಿತಿದ್ದಾರೆ. ಅವರೂ ಪರಿವರ್ತನೆಗೊಳ್ಳಲಿ ಎಂಬ ಆಶಯ ನಮ್ಮದು. ಅವರ ಎಲ್ಲ ಚಟುವಟಿಕೆಗಳು ಬಸವ ತತ್ವದ ಆಶಯದವುಗಳಲ್ಲ ಎಂಬುದು ನೆನಪಿನಲ್ಲಿ ಇಟ್ಟುಕೊಳ್ಳಿ.

ವಚನಾಂಕಿತ ತಿದ್ದಿದ ಮಾತೆ ಮಹಾದೇವಿಯವರ ನಿಲುವು ಮುಗಿದ ಅಧ್ಯಾಯ. ನ್ಯಾಯಾಂಗ ನೀಡಿರುವ ತೀರ್ಪನ್ನು ಒಪ್ಪಿಕೊಂಡ ಮೇಲೆ ಇನ್ನೆಲ್ಲಿಯ ತಕರಾರು. ಪದೇ ಪದೇ ಮಾತೆ ಮಹಾದೇವಿಯವರ ಹಿಡಿತಂದು ಬಸವ ಚಳವಳಿ ಪಸರಿಸದಂತೆ ತಡೆ ಒಡ್ಡುವ ಯತ್ನ ಸಫಲಗೊಳ್ಳಲು ಸಾಧ್ಯವಿಲ್ಲ.

ವಿಶ್ವಾರಾಧ್ಯ ಸತ್ಯಂಪೇಟೆ, ರಾಜ್ಯ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭೆ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.