ADVERTISEMENT

‘ಧರ್ಮ’ ರಾಜಕೀಯ ಪಕ್ಷವಲ್ಲ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 19:30 IST
Last Updated 25 ಜುಲೈ 2017, 19:30 IST

ವೀರಶೈವವಾಗಲೀ, ಲಿಂಗಾಯತವಾಗಲೀ ‘ಸರ್ಕಾರದ ಕೃಪಾಕಟಾಕ್ಷ’ ಕೋರಿದ್ದು ಯಾವಾಗ? ಹೇಯ ರಾಜಕೀಯ ಇವೆರಡರ ಕಾಲು ನೆಕ್ಕಿ ಮೈಲಿಗೆ ಮಾಡಹೊರಟಿದೆ! ‘ಲಿಂಗಾಯತ ಪ್ರತ್ಯೇಕ ಧರ್ಮ...’ (ಸಂಗತ, ಜುಲೈ 25) ಬರಹ ಬೇಸರ ಮೂಡಿಸಿತು. ಮೀಸಲಾತಿ, ವೋಟ್ ಬ್ಯಾಂಕ್ ಇತ್ಯಾದಿ ಕ್ಷುಲ್ಲಕ ವಿಚಾರಗಳನ್ನು ಆಚೆ ಇಡಿ. ಏಕೆಂದರೆ ‘ಧರ್ಮ’ ಎನ್ನುವುದು ಪಕ್ಷ ರಾಜಕೀಯವಲ್ಲ.

‘ಹಿಂದೂ ಧರ್ಮ’ ಬಿಟ್ಟುಹೋಗಬಾರದೆಂದು ಲಿಂಗಾಯತರಿಗೆ ಪೇಜಾವರ ಸ್ವಾಮಿಗಳು ಕರೆಕೊಟ್ಟಿರುವುದಾಗಿಯೂ ವರದಿಯಾಗಿದೆ. ಹಾಗಾದರೆ ಹಿಂದೂ ಎನ್ನುವುದು ಯಾವ ಧರ್ಮ? ಪ್ರಶ್ನೆ ಏಕೆಂದರೆ ಜೈನ, ಬೌದ್ಧ, ಸಿಖ್ ಧರ್ಮಗಳು ಸಿಡಿದೆದ್ದುದು ವೈದಿಕ ಆಚರಣೆಗಳ ವಿರುದ್ಧವೇ ಹೊರತು ‘ಹಿಂದೂ’ ಎಂಬ ‘ಧರ್ಮ’ದ ವಿರುದ್ಧ ಅಲ್ಲ. ಜಿಜ್ಞಾಸೆಯಲ್ಲಿ ಬಹಳಷ್ಟೇ ಅಂತರಗಳಿದ್ದರೂ ತಿಥಿ-ವಾರ, ನಕ್ಷತ್ರ, ದಿನಾಚರಣೆ ಇತ್ಯಾದಿ ಲೆಕ್ಕಾಚಾರದಲ್ಲಾಗಲೀ, ತಿಂಡಿ-ತೀರ್ಥ ಇತ್ಯಾದಿ ಸಾಂಸ್ಕೃತಿಕ, ಮನರಂಜನೆ ಮುಂತಾದ ವಿಚಾರಗಳಲ್ಲಿ ಈ ‘ಧರ್ಮೀಯರು’ ಸಹ, ಬಹುತೇಕ ವೈದಿಕವನ್ನೇ ಅನುಸರಿಸುತ್ತಾರೆ. ಮತಭೇದಗಳು, ವೈದಿಕವೆಂಬ ವ್ಯತ್ಯಸ್ಥ ಪಂಗಡಗಳಲ್ಲೂ ಕಂಡುಬರುತ್ತದೆ. ಇದು ಅಂತಃಸತ್ವದ ವಿಚಾರ.

ಯಾವುದೇ ಧರ್ಮದ ಮಹಾನ್ ಸಾಧಕರು ಧರ್ಮದ ಆಳ-ಅಗಲಗಳನ್ನು ಮೈಗೂಡಿಸಿಕೊಂಡು ಅತೀತ ಸಂತರಾಗಿರುತ್ತಾರೆ. ಹೀಗಾಗಿ ಧರ್ಮವೆನ್ನುವುದಕ್ಕೇ ನಿರ್ದಿಷ್ಟ ವ್ಯಾಖ್ಯೆ ಇಲ್ಲ; ಇನ್ನು ‘ಹಿಂದೂ’ ಎನ್ನುವುದಕ್ಕಂತೂ ಏಕಸೂತ್ರವೂ ಇಲ್ಲ. ಅಂಥದರಲ್ಲಿ ವೀರಶೈವ-ಲಿಂಗಾಯತದ ಪ್ರತ್ಯೇಕತೆಗಾಗಿ ಸರ್ಕಾರದ ಜಿದ್ದು, ಏಕತೆಗಾಗಿ ಇವೆರಡೂ ಅಲ್ಲದ (!) ಸ್ವಾಮಿಗಳ ಕರೆ ಎರಡೂ ಹಾಸ್ಯಾಸ್ಪದ ಎನಿಸುತ್ತವೆ.

ADVERTISEMENT

ಆರ್.ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.