ADVERTISEMENT

ಧೈರ್ಯ ಕುಂದಿಸುವ ಮಾತು

ಗಿರಿರಾಜು, ಬೆಂಗಳೂರು
Published 24 ಡಿಸೆಂಬರ್ 2017, 19:30 IST
Last Updated 24 ಡಿಸೆಂಬರ್ 2017, 19:30 IST

‘ಕೃಷಿ ಸಾಲ ಮನ್ನಾದಿಂದ ಲಾಭ ಇಲ್ಲ... ಕೃಷಿಯಲ್ಲಿ ಲಾಭಕ್ಕಿಂತ ನಷ್ಟವೇ ಹೆಚ್ಚು, ಜಿಡಿಪಿಗೆ ಕೃಷಿಯ ಕೊಡುಗೆ ಕನಿಷ್ಠ,  ರೈತರು ಪರ್ಯಾಯ ಉದ್ಯೋಗಗಳನ್ನೂ ಮಾಡಬೇಕು... (ಪ್ರ.ವಾ., ಡಿ.22) ಎಂಬ ಸಲಹೆಗಳನ್ನು ಡಾ. ದೇವಿಶೆಟ್ಟಿ ಅವರು ನೀಡಿದ್ದಾರೆ.

ಕೃಷಿಯೇ ಬಹುಪಾಲು ಜನರ ಪ್ರಧಾನ ಕಸುಬಾಗಿರುವ ದೇಶದಲ್ಲಿ, ‘ವೈದ್ಯೋದ್ಯಮಿ’ಯೊಬ್ಬರು ರೈತರ ಆತ್ಮಸ್ಥೈರ್ಯವನ್ನು ಕುಂದಿಸುವ ಮಾತನಾಡಿರುವುದು ಸರಿಯಲ್ಲ.

ನಿಜ, ಸಾಲ ಮನ್ನಾ ಮಾಡುವುದು ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ರೈತರು ಹಿಂದೆಲ್ಲ ಜೀವನದ ಸಹಜ ಭಾಗವೆಂಬಂತೆ ಶೂನ್ಯ ಬಂಡವಾಳದಲ್ಲಿ, ನೈಸರ್ಗಿಕವಾಗಿ ಕೃಷಿ ಮಾಡುತ್ತಿದ್ದರು. ಅವರಲ್ಲಿ ಹೆಚ್ಚು ಲಾಭದ ಆಸೆ ಮೂಡಿಸಿ, ಹೈಬ್ರಿಡ್ ಬಿತ್ತನೆ ಬೀಜಗಳನ್ನು ಪರಿಚಯಿಸಿ, ಹೆಚ್ಚು ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ ಮತ್ತು ಬೆಳೆ ಸಂರಕ್ಷಿಸಲು ದುಬಾರಿ ಕೀಟನಾಶಕ ಕೊಳ್ಳುವಂತೆ ಮಾಡಿ, ಹೆಚ್ಚೆಚ್ಚು ಸಾಲ ಮಾಡಿಸಿ ತಮ್ಮ ವ್ಯವಹಾರಗಳನ್ನು ವೃದ್ಧಿಸಿಕೊಂಡು ಕೃಷಿಯ ದಿಕ್ಕನ್ನೇ ಬದಲಿಸಿದ್ದು ಉದ್ಯಮಿಗಳು. ಇಷ್ಟಾದ ಮೇಲೂ ರೈತರು ತಮ್ಮ ಫಸಲಿಗೆ ನ್ಯಾಯವಾದ ಬೆಲೆ ಸಿಗದೆ ಸಾಲಗಾರರಾಗಿಯೇ ಉಳಿದಿದ್ದಾರೆ.

ADVERTISEMENT

ಜಿಡಿಪಿಯಲ್ಲಿ ಕೃಷಿಯ ಪಾಲು ಕಡಿಮೆ ಇರಬಹುದು. ಆದರೆ ರೈತರು ಆಹಾರ ಬೆಳೆಯುವುದನ್ನು ಬಿಟ್ಟು ಬೇರೆ ವೃತ್ತಿಗೆ ಹೊರಳಿದರೆ ಆಗಬಹುದಾದ ಪರಿಣಾಮ ಉಹಿಸಲು ಅಸಾಧ್ಯ. ಜನರು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬರಬಹುದು. ಆಹಾರವನ್ನು ಕಾರ್ಖಾನೆ ಅಥವಾ ಆಸ್ಪತ್ರೆಯಲ್ಲಿ ತಯಾರಿಸಲಾಗುವುದಿಲ್ಲವಲ್ಲ!

ಇತರ ಉತ್ಪನ್ನಗಳಿಗೆ ಗರಿಷ್ಠ ಮಾರಾಟ ಬೆಲೆ (ಎಂ.ಆರ್‌.ಪಿ) ನಿಗದಿ ಮಾಡುವಂತೆ ತರಕಾರಿ, ಧಾನ್ಯಗಳಿಗೂ ಸ್ಥಿರ ಬೆಲೆ ನಿಗದಿ ವ್ಯವಸ್ಥೆಯಾದರೆ ರೈತರು ಸಹ ಉದ್ಯಮಿಗಳಾಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.