ADVERTISEMENT

ನ್ಯಾಯ ಸಿಗಲಿ!

ಡಾ.ಜಿ.ವಿ.ಆನಂದಮೂರ್ತಿ
Published 27 ಮಾರ್ಚ್ 2015, 19:30 IST
Last Updated 27 ಮಾರ್ಚ್ 2015, 19:30 IST

ಈಚೆಗೆ ನಡೆದ ಒಂದು ಅಸಹಜ ಸಾವು ಇಡೀ ರಾಜ್ಯದಲ್ಲಿ ಉಂಟುಮಾಡಿದ ತಲ್ಲಣ ಹೇಳತೀರದ್ದು. ಈ ಸಾವಿಗೆ ನ್ಯಾಯ ದೊರಕಿಸಿಕೊಡಲು ವಿರೋಧ ಪಕ್ಷಗಳು ಒಂದುಗೂಡಿ ಅವಿರತ ಹೋರಾಟ ಮಾಡಿ ಪ್ರಕರಣವನ್ನು ಸಿಐಡಿ ತನಿಖೆಯಿಂದ ಬಿಡಿಸಿ, ಸಿಬಿಐಗೆ ಒಪ್ಪಿಸಲು ಯಶಸ್ವಿಯಾಗಿವೆ. ಇವರ ಜೊತೆಗೆ ಬಯಲು ಸೀಮೆಯ ಜನರು, ಕೆಲ ಮಠಾಧಿಪತಿಗಳು, ವಿವಿಧ ಕುಲ ಸಂಘಟನೆಗಳು ಈ ಹೋರಾಟದಲ್ಲಿ ನೇರವಾಗಿ ಭಾಗಿಯಾಗಿದವು. 

ಇದರಲ್ಲಿ ಒಂದು ಮಠವಂತೂ ಸಾವಿಗೀಡಾದವರ ಹತ್ತಿರದ ಸಂಬಂಧಿ ವಿದ್ಯಾರ್ಥಿಗೆ ಶಿಕ್ಷಣ ನೀಡುವ ಹೊಣೆಯನ್ನು ತಾನೆ ಹೊತ್ತಿತಲ್ಲದೆ, ಮೃತರ ಕುಟುಂಬಕ್ಕೆ ₨ 10 ಲಕ್ಷ ನೆರವನ್ನೂ ನೀಡಿತು. ಈ ಪ್ರಕರಣದಿಂದಾಗಿ, ಬಲಿಷ್ಠರ ದಬ್ಬಾಳಿಕೆಗೆ ಒಳಗಾಗಿ ಸಾವಿಗೀಡಾಗುವ ದುರ್ಬಲ ಹಾಗೂ ತಬ್ಬಲಿ ಸಮುದಾಯಗಳು ತಮಗೂ ಇದೇ ಬಗೆಯ ನ್ಯಾಯ ಸಿಗಬಹುದೆಂದು ನಂಬಿವೆ.

ಆದರೆ, ಇದೇ ಮಾರ್ಚ್ 19 ರಂದು ಸಂತೇಮರಹಳ್ಳಿಯಲ್ಲಿ ಕೃಷ್ಣಯ್ಯ ಮತ್ತು ನಂಜಯ್ಯ ಎಂಬ ಇಬ್ಬರು ದಲಿತ ಕಾರ್ಮಿಕರು, ಭೂಮಾಲೀಕರ ಕ್ರೌರ್ಯಕ್ಕೆ ಸಿಕ್ಕಿ ಕೊಲೆಯಾಗಿದ್ದಾರೆ. ಮನೆಗೆ ಮುಂದಾಳಾಗಿದ್ದ ಇವರಿಬ್ಬರ ಸಾವಿನಿಂದ ಅವರ ಎರಡೂ ಕುಟುಂಬಗಳು ದಿಕ್ಕೆಟ್ಟು ಬೀದಿಗೆ ಬಿದ್ದಿವೆ (ಪ್ರ.ವಾ., ಮಾ. 27) . ಈ ದಾರುಣ ಸುದ್ದಿ ನಮ್ಮ ವಿರೋಧ ಪಕ್ಷದ ನಾಯಕರ ಅಂತಃಕರಣಕ್ಕೆ, ಮಠಾಧೀಶರ ಎದೆಗೆ ನಾಟಿರಲಾರದು! ಈ ಸಾವಿನ ಬಗ್ಗೆ ಇದುವರೆಗೂ ಯಾವ ಜನಪ್ರತಿನಿಧಿಯೂ  ತುಟಿಬಿಚ್ಚಿಲ್ಲ! ಇದಕ್ಕೆ ಕಾರಣ ಅಂಗೈ ಹುಣ್ಣಿನಷ್ಟೇ ಸ್ಪಷ್ಟ.

ಕೊಲೆಯಾದವರು ಇಬ್ಬರೂ ದಲಿತರು. ಹೀಗಾಗಿ ಹಿಂದೆ ನಡೆದಿರುವ ದಲಿತರ ಕೊಲೆಗಳಿಗೆ ಆದ ಗತಿಯೇ ಈ ಪ್ರಕರಣಕ್ಕೂ ಆಗಬಹುದು! ಈ ಹೃದಯ ವಿದ್ರಾವಕ ಘಟನೆ ಕ್ರಮೇಣ ಕೊಲೆಗೀಡಾದವರೊಡನೆ ಮಣ್ಣಲ್ಲಿ ಮಣ್ಣಾಗಬಹುದು! ಇವರ ಸಾವಿಗೆ ನ್ಯಾಯ ದೊರಕಿಸಿಕೊಡಲು ಹೋರಾಟ ಮಾಡುವವರು ಯಾರಾದರೂ ಇದ್ದಾರೆಯೇ? ಮೊನ್ನೆಯ ಸಾವಿಗೆ ಕಣ್ಣೀರು ಸುರಿಸಿದ ಈ ಸಮಾಜವೇ ಇದಕ್ಕೆ ಉತ್ತರಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.