ADVERTISEMENT

ಪಾಪು ವಿಷಾದ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST

‘ಕುವೆಂಪು ಮೈಸೂರಿಗಷ್ಟೇ ಸೀಮಿತರಾಗಿದ್ದರು. ಅವರೆಂದೂ ಸಮಗ್ರ ಕರ್ನಾಟಕವನ್ನು ಸುತ್ತಿ ನೋಡಲಿಲ್ಲ’ ಎಂದು ಪಾಟೀಲ ಪುಟ್ಟಪ್ಪನವರು ಕುವೆಂಪು ಅವರನ್ನು ಟೀಕಿಸಿದ್ದಾರೆ (ಪ್ರ.ವಾ., ನ. 20). ಇದು ಪಾಪು ಅವರ ತಪ್ಪು ಗ್ರಹಿಕೆಯ ಪ್ರತಿಕ್ರಿಯೆಯಾಗಿದೆ. ಕುವೆಂಪು ವೃತ್ತಿಯಿಂದ ಅಧ್ಯಾಪಕ, ಪ್ರವೃತ್ತಿಯಿಂದ ಲೇಖಕ. ವೃತ್ತಿಯ ಒತ್ತಡದ ನಡುವೆಯೂ ಅವರು ನಾಡು–ನುಡಿಗಾಗಿ ಅವಿರತ ದುಡಿದವರಾಗಿದ್ದಾರೆ.

ಇದನ್ನು ಪಾಪು ಅವರು ಅರ್ಥಮಾಡಿಕೊಂಡು ಮಾತನಾಡಬೇಕಿತ್ತು. ಪಾಪು ಅವರ ಕ್ಷೇತ್ರವು ಕುವೆಂಪು ಅವರಿಗಿಂತ ವಿಭಿನ್ನವಾದುದು. ಅವರೋರ್ವ ಪತ್ರಕರ್ತ. ತಿರುಗಾಟ ಅವರಿಗೆ ಅನಿವಾರ್ಯವಾಗಿತ್ತು. ಇದರ ಜೊತೆಗೆ ಕರ್ನಾಟಕಕ್ಕೆ ಸಂಬಂಧಿಸಿದಂತೆ ಪಾಪು ಅವರ ಹೋರಾಟದ ಮನಸ್ಸು ಮೇಳೈಸಿ ಬಂದುದು ಎಲ್ಲ ಕನ್ನಡಿಗರಿಗೂ ಹೆಮ್ಮೆ ತರುವ ಸಂಗತಿ.

ಕುವೆಂಪು ಅವರು ಕರ್ನಾಟಕ ಏಕೀಕರಣ ಕುರಿತು ಬರೆದು ಪ್ರೇರಣೆ ಕೊಟ್ಟರು. ‘ಅಖಂಡ ಕರ್ಣಾಟಕ: ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ!’ ಎಂದು ಅಧಿಕಾರಶಾಹಿಯನ್ನು ಕಿವಿಹಿಂಡಿ ಎಚ್ಚರಿಸುವ ಕವಿತೆಯನ್ನು ಕಟ್ಟಿದರು. ಇದು ಒಂದು ಕಾಲಘಟ್ಟದಲ್ಲಿ ಪಾಪು ಅವರಿಗೂ ಸ್ಫೂರ್ತಿಯಾಗಿ ಕನ್ನಡ ಹೋರಾಟದಲ್ಲಿ ಅವರೂ ಪಾಲ್ಗೊಳ್ಳಲು ಸಾಧ್ಯವಾಯಿತು.

ADVERTISEMENT

ಇದು ಎಂದಿಗೂ ಕನ್ನಡಿಗರಾದ ನಾವು ನೆನಪಿಡಬೇಕಾದ ಸತ್ಯವಾಗಿದೆ. ಅಂದಹಾಗೆ ಇಲ್ಲಿಯವರೆಗೆ ಅಖಂಡ ಕರ್ನಾಟಕದ ಕನಸು ಕಾಣುತ್ತಿದ್ದ ಪಾಪು, ಉತ್ತರ ಕರ್ನಾಟಕದ ಬಗ್ಗೆ ವಿಶೇಷ ಒಲವು ತೋರುವ ನೆಪದಲ್ಲಿ ದಕ್ಷಿಣ ಕರ್ನಾಟವನ್ನು ಪ್ರತ್ಯೇಕ ಕಣ್ಣಿನಿಂದ ನೋಡುತ್ತಿರುವುದು ನಿಜಕ್ಕೂ ವಿಷಾದನೀಯ.
-ಸಂಪತ್ ಬೆಟ್ಟಗೆರೆ, ಮೂಡಿಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.