ADVERTISEMENT

ಪಾಲಿಕೆ- ನಕ್ಷತ್ರಿಕರು!

ಪಿ.ಜೆ.ರಾಘವೇಂದ್ರ
Published 29 ಏಪ್ರಿಲ್ 2016, 19:30 IST
Last Updated 29 ಏಪ್ರಿಲ್ 2016, 19:30 IST

ಅಷ್ಟು ಕೋಟಿ ತೆರಿಗೆ ಸಂಗ್ರಹಿಸಿದೆವು, ಇಷ್ಟು ಕೋಟಿ ತೆರಿಗೆ ಸಂಗ್ರಹಿಸಿದೆವು ಎಂದು ಮೈಸೂರು ನಗರಪಾಲಿಕೆ ಆಗಾಗ್ಗೆ ಬೀಗುತ್ತಿರುತ್ತದೆ. ಅದು ಸುಳ್ಳು. ನಮ್ಮ ಈ ನಗರಪಾಲಿಕೆ ಎಂದೂ ತೆರಿಗೆ ಸಂಗ್ರಹ ಮಾಡಿಲ್ಲ. ನಾಗರಿಕರು ಸ್ವಯಂ ಪ್ರೇರಿತರಾಗಿ ಪಾಲಿಕೆಗೆ ತೆರಿಗೆ ಪಾವತಿಸುತ್ತಾರೆ. ತೆರಿಗೆ ವಸೂಲು ಮಾಡುವುದಿರಲಿ, ತಾವಾಗಿಯೇ ತೆರಿಗೆ ಪಾವತಿಸಲು ಕಚೇರಿಗೆ  ಬರುವ ನಾಗರಿಕರಿಂದ ತೆರಿಗೆ ಕಟ್ಟಿಸಿಕೊಳ್ಳುವ ಸೌಜನ್ಯವೂ ಪಾಲಿಕೆಗಿಲ್ಲ.

ತೆರಿಗೆ ಪಾವತಿಸಲು ಬರುವ ನಾಗರಿಕರಿಂದ ಅರ್ಜಿ ತುಂಬಿಸಲೆಂದು ನೂರಾರು ರೂಪಾಯಿ ಕೀಳಲೆಂದೇ ಪಾಲಿಕೆಯು ನಕ್ಷತ್ರಿಕರನ್ನು ಅನಧಿಕೃತವಾಗಿ ನೇಮಿಸಿ ಅವರಿಂದಲೂ ಕಮಿಷನ್ ಹೊಡೆಯುತ್ತದೆ! ತೆರಿಗೆ ಮೊತ್ತವನ್ನು ಲೆಕ್ಕಾಚಾರ ಹಾಕಲು ಅನುಕೂಲವಾಗಲೆಂದೇ ಮುದ್ರಣವಾಗುವ ‘ಕೈಪಿಡಿ’ ಲಭ್ಯವಾದರೆ ಸಾರ್ವಜನಿಕರೇ ತೆರಿಗೆಯ ಮೊತ್ತವನ್ನು ಲೆಕ್ಕ ಮಾಡಿ ಅರ್ಜಿ ತುಂಬಿ ಪಾವತಿಸಬಹುದು.

ಆದರೆ ಪಾಲಿಕೆಯು ಈ ಕೈಪಿಡಿಯನ್ನು ಅಡಗಿಸಿಟ್ಟು ಅದು ಸಾರ್ವಜನಿಕರ ಕಣ್ಣಿಗೆ ಕಾಣದಂತೆ ಮಾಡಿದೆ. ಹೀಗಾಗಿ ತೆರಿಗೆ ಪಾವತಿಸುವ ಸಾರ್ವಜನಿಕರು ಕೈಪಿಡಿ ಇಲ್ಲದೆ ವಿಧಿ ಇಲ್ಲದೆ ಪಾಲಿಕೆಯ ನಕ್ಷತ್ರಿಕರಿಗೆ ಐವತ್ತು ರೂಪಾಯಿ ನೀಡಿ ಅವರಿಂದಲೇ ಲೆಕ್ಕ ಮಾಡಿಸುವ ಕರ್ಮ ಬಂದೊದಗಿದೆ. ಅಷ್ಟೇ ಅಲ್ಲ, ನಾಗರಿಕರು ತೆರಿಗೆ ಹಣವನ್ನು ಪಾಲಿಕೆಯ ಅಧಿಕಾರಿಗಳಿಗೆ ಬೇಕಾದ ಒಂದು ಬ್ಯಾಂಕಿನಲ್ಲಿಯೇ ಜಮೆ ಮಾಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.