ADVERTISEMENT

ಪೊಲೀಸರ ತಪ್ಪೇನು?

ಮಾನಸ ಎಂ., ಬೆಂಗಳೂರು
Published 5 ಮೇ 2016, 19:30 IST
Last Updated 5 ಮೇ 2016, 19:30 IST

ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಹೋರಾಡುತ್ತಿದ್ದ ಗಾರ್ಮೆಂಟ್‌ ಮಹಿಳೆಯರ ಮೇಲೆ ಪೊಲೀಸರ ಅಟಾಟೋಪ, ದರ್ಪ, ಹಲ್ಲೆ ಎಂಬಂತಹ ಸುದ್ದಿಗಳು ಮಾಧ್ಯಮಗಳಲ್ಲಿ ಇತ್ತೀಚೆಗೆ ಕಾಣಿಸಿಕೊಂಡವು.

ಹಾಗಾದರೆ ಪೊಲೀಸರು ನಿಜವಾಗಿಯೂ ಅನಗತ್ಯವಾಗಿ ದೌರ್ಜನ್ಯ ಎಸಗಿದರೇ? ಯಾವುದೇ ಮುನ್ಸೂಚನೆ ನೀಡದೆ ಒಂದು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದ, ಆರು ಗಂಟೆಗಳಿಗೂ ಹೆಚ್ಚು ಕಾಲ ರಾಜ್ಯದ ಪ್ರಮುಖ ರಸ್ತೆಗಳು, ಹೆದ್ದಾರಿಗಳಲ್ಲಿ ಹತ್ತಾರು ಕಿ.ಮೀ. ದೂರದಷ್ಟು ಸಂಚಾರವನ್ನು ಸ್ಥಗಿತಗೊಳಿಸಿ, ಒಬ್ಬ ಮುಖಂಡರೂ ಇಲ್ಲದ ಅಷ್ಟು ದೊಡ್ಡ ಪ್ರಮಾಣದ ಜನಸಮೂಹವನ್ನು ಪೊಲೀಸರು ಹೇಗೆ ನಿಭಾಯಿಸಬೇಕಿತ್ತು?

ಹೆಂಗಸರ ಮೇಲೆ ಪುರುಷ ಪೊಲೀಸರು ಲಾಠಿ ಬೀಸಿದ  ಬಗ್ಗೆಯೂ  ಆರೋಪಗಳಿವೆ. ಆದರೆ ಪ್ರತಿಭಟನಾಕಾರರುಮೊದಲೇ ಸಂಬಂಧಪಟ್ಟ ಠಾಣೆಗೆ ಮಾಹಿತಿ ನೀಡಿ ಪ್ರತಿಭಟನೆಗೆ ಒಪ್ಪಿಗೆ ಪಡೆದಿರಲಿಲ್ಲ. ಮಾಹಿತಿ ನೀಡಿದ್ದಲ್ಲಿ ಬೇರೆ ಕಡೆಗಳಿಂದ ಮಹಿಳಾ ಸಿಬ್ಬಂದಿಯನ್ನು ಕರೆಸಿಕೊಳ್ಳಬಹುದಿತ್ತೇನೊ.
ಆದಾಗ್ಯೂ ನಮ್ಮಲ್ಲಿ ಮಹಿಳಾ ಪೊಲೀಸರ ಸಂಖ್ಯೆ ಬಹಳಷ್ಟು ಕಡಿಮೆಯಿದೆ. ಅಷ್ಟು ದೊಡ್ಡ ಪ್ರಮಾಣದ ಪ್ರತಿಭಟನಾಕಾರರು ರಸ್ತೆಗಿಳಿದಿದ್ದರು.

ಟ್ರಾಫಿಕ್ ಸ್ಥಗಿತಗೊಂಡ ಕಾರಣ  ಹೆಚ್ಚಿನ ಸಂಖ್ಯೆಯ ಜನ ರಸ್ತೆಯಲ್ಲಿದ್ದರು. ಏನಾದರೂ ಅಚಾತುರ್ಯ ನಡೆದಿದ್ದಲ್ಲಿ ಸಾಕಷ್ಟು ಜನರಿಗೆ ಪ್ರಾಣಾಪಾಯವಾಗುವ ಸಾಧ್ಯತೆ ಇತ್ತು. ಪ್ರತಿಭಟನೆ ನಡೆಸುವವರು ಶಾಂತಿಯಿಂದ ನಡೆದುಕೊಳ್ಳುತ್ತಿದ್ದರೂ ಕೆಲ ಸ್ವಹಿತಾಸಕ್ತರು ಗಲಭೆ ಸೃಷ್ಟಿಸುವುದಿಲ್ಲ ಎಂದು ಏನು ಭರವಸೆ?

ಪೊಲೀಸರಿಗೂ ಮಹಿಳೆಯರ ಮೇಲೆ ದರ್ಪ ತೋರಿ, ತಿಂಗಳಾನುಗಟ್ಟಲೆ ಪೊಲೀಸ್ ವಿಚಾರಣೆ, ಮಹಿಳಾ ಆಯೋಗಗಳ ವಿಚಾರಣೆಗಳಿಗೆ ಒಳಪಡಲು ಇಷ್ಟವೇನಿಲ್ಲ. ಆದರೆ ಹಿಂಸಾಚಾರಕ್ಕೆ ಒಡ್ಡಿಕೊಂಡ ಲಕ್ಷಾಂತರ ಪ್ರತಿಭಟನಾಕಾರರನ್ನು ಮಹಿಳೆ-ಪುರುಷರೆಂದು ವರ್ಗೀಕರಿಸುತ್ತಾ ಕೂರುವ ಸಮಯವಾಗಿತ್ತೇ ಅದು?

ಬಸ್‌ಗಳನ್ನು ಸುಟ್ಟು, ವಾಹನಗಳ ಜಖಂ ಮಾಡಿ, ಪೊಲೀಸ್‌ ಠಾಣೆಗೆ ನುಗ್ಗಿ, ಕಲ್ಲು ತೂರಾಡಿ ಮಹಿಳಾ ಪೇದೆಯನ್ನು ಗಾಯಗೊಳಿಸಿ,  ಜಪ್ತಿ ಮಾಡಿಟ್ಟಿದ್ದ ವಾಹನಗಳಿಗೆ ಬೆಂಕಿ ಹಚ್ಚಿದಾಗ ಪೊಲೀಸರು ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿದರೆ ಮಾನವ ಹಕ್ಕುಗಳ ಉಲ್ಲಂಘನೆ
ಆಗುವುದೇ?  ಈ ಘಟನೆಯಲ್ಲಿ ನೋವು ಕಾರ್ಮಿಕರಿಗೂ ಆಗಿದೆ, ಪೊಲೀಸರಿಗೂ ಆಗಿದೆ.

ಪೊಲೀಸರು ಜನಸ್ನೇಹಿ ಆಗಬೇಕೆನ್ನುವ ನಾವು, ಪೊಲೀಸರೆಂದರೆ ಕ್ರೂರಿಗಳು ಎಂಬ ಸಿನಿಕತನವನ್ನೂ ಬಿಡಬೇಕು. ಒಂದೇ ಕಡೆಯಿಂದ ಬದಲಾವಣೆ ನಿರೀಕ್ಷಿಸುವುದು ತಪ್ಪಲ್ಲವೇ?

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.