ADVERTISEMENT

‘ಬಲ’ಕ್ಕೆ ತಿರುಗಿದರೇ?

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 19:40 IST
Last Updated 19 ಮಾರ್ಚ್ 2018, 19:40 IST

‘ಲೆನಿನ್ ಬದಲಿಗೆ ಭಗತ್‍ ಸಿಂಗ್ ಯಾಕಾಗದು’ (ಪ್ರ.ವಾ., ಮಾ. 16) ಎಂಬ ರಾಮಚಂದ್ರ ಗುಹಾ ಅವರ ಲೇಖನಕ್ಕೆ ಈ ಪ್ರತಿಕ್ರಿಯೆ. ‘ಧಮನಿಯಲ್ಲಿ ಬಿಸಿ ನೆತ್ತರುಕ್ಕದೆ ನೆನೆಯಲಾರೆ ನಿನ್ನ ಲೆನಿನ್’ ಎಂದು ಉದ್ಗರಿಸಿದ ಕುವೆಂಪು ಅವರಾಗಲೀ, ‘ಸೋವಿಯತ್ ಒಕ್ಕೂಟಕ್ಕೆ ಭೇಟಿ ನೀಡದೆ ಇದ್ದಿದ್ದರೆ ತಮ್ಮ ಯಾತ್ರೆ ಪೂರ್ಣಗೊಳ್ಳುತ್ತಿರಲಿಲ್ಲ’ ಎಂದು ಲೆನಿನ್ ಕಟ್ಟಿದ ಸಮಾಜವಾದಿ ರಾಷ್ಟ್ರವನ್ನು ಪ್ರಶಂಸಿಸಿದ್ದ ರವೀಂದ್ರನಾಥ್ ಟ್ಯಾಗೋರ್‍ ಅವರಾಗಲೀ, ‘ವೇಶ್ಯಾವಾಟಿಕೆಯನ್ನು ನಿರ್ಮೂಲನಗೊಳಿಸಿದ ಪ್ರಥಮ ದೇಶ’ ಎಂದು ಸೋವಿಯತ್ ಒಕ್ಕೂಟವನ್ನು ಹೊಗಳಿದ ತ.ರಾ.ಸು. ಅವರಾಗಲೀ, ಸೋವಿಯತ್ ಒಕ್ಕೂಟದ ಸಾಧನೆಗಳನ್ನು ಕೊಂಡಾಡಿದ ಮಾಸ್ತಿ, ಜಿ.ಎಸ್. ಶಿವರುದ್ರಪ್ಪ... ಇವರು ಯಾರೂ ಮಾರ್ಕ್ಸ್‌ವಾದಿಗಳಾಗಿರಲಿಲ್ಲ ಎಂಬುದನ್ನು ಗುಹಾ ಅವರ ಗಮನಕ್ಕೆ ತರಲು ಇಚ್ಛಿಸುತ್ತೇನೆ.

ಲೆನಿನ್‍ ಅವರನ್ನು ಮೆಚ್ಚಿದ್ದ ಭಗತ್‍ ಸಿಂಗ್, ಗುಹಾ ಅವರು ತಿಳಿದಂತೆ ಅಪ್ರಬುದ್ಧರೂ ಅಲ್ಲ, ಅಮಾಯಕರೂ ಅಲ್ಲ. ಲೆನಿನ್‌ ಅವರ ಮಹಾನತೆಯನ್ನು ಅರ್ಥ ಮಾಡಿ
ಕೊಂಡಿದ್ದ ಕ್ರಾಂತಿಕಾರಿ ಆತ. ಭಗತ್‍ ಸಿಂಗ್‍ ಅವರ ಲೇಖನಗಳನ್ನು ಓದಿದರೆ ಈ ಕುರಿತು ಇನ್ನಷ್ಟು ತಿಳಿಯಬಹುದು.

ಹಳತರ ಗರ್ಭದಿಂದ ಹೊಸತು ಹುಟ್ಟುವಾಗ ನೋವು ಸಹಜ ತಾನೇ! ಬಹುಸಂಖ್ಯಾತರ ಒಳಿತಿಗಾಗಿ ಅಲ್ಪಸಂಖ್ಯಾತ ಶೋಷಕರನ್ನು ಮಟ್ಟಹಾಕಿದರೆ, ಆ ಕ್ರಾಂತಿಯ ನೇತೃತ್ವ ವಹಿಸಿದವರು ನಿರಂಕುಶಾಧಿಕಾರಿಯೇ? ವಿಶ್ವದ ದೊಡ್ಡಣ್ಣನೆಂದು ಮೆರೆಯುತ್ತಿದ್ದ ಅಮೆರಿಕಕ್ಕೆ ಸರಿಸಮನಾಗಿ ತಮ್ಮ ಸಮಾಜವಾದಿ ದೇಶವನ್ನು ಬೆಳೆಸಿದ, ಯುದ್ಧಗಳನ್ನು ಹುಟ್ಟುಹಾಕುವ ಅಮೆರಿಕದ ಪ್ರವೃತ್ತಿಗೆ ಕಡಿವಾಣ ಹಾಕಿದ ಮೇಧಾವಿ ಸ್ಟಾಲಿನ್ ಕ್ರೂರಿಯೇ? ಎರಡನೇ ವಿಶ್ವ ಯುದ್ಧದಲ್ಲಿ ಹಿಟ್ಲರನ ದಾಳಿಯಿಂದ ವಿಶ್ವವನ್ನೇ ರಕ್ಷಿಸಿದ ಸ್ಟಾಲಿನ್‍ ಅವರದ್ದು ನಿರಂಕುಶ ಪ್ರಭುತ್ವವೇ? ಸಾಮ್ರಾಜ್ಯಶಾಹಿಗಳು ಹರಿಬಿಡುವ ಇಂಥಾ ಹಸಿಸುಳ್ಳುಗಳನ್ನು ಜನಸಾಮಾನ್ಯರು ನಂಬಬಹುದೇನೋ! ಆದರೆ ಇತಿಹಾಸ ತಜ್ಞ ಎಂದು ಕರೆಯಿಸಿಕೊಳ್ಳುವ ಗುಹಾ, ಈ ಕುರಿತು ಸ್ವಲ್ಪ ಸಂಶೋಧನೆ ಮಾಡಿದರೆ ಒಳಿತು.

ADVERTISEMENT

ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚಿ, ಗಣ್ಯರ ತೇಜೋವಧೆ ಮಾಡುವುದು ಬಲಪಂಥೀಯರ ಚಾಳಿ. ಇತಿಹಾಸ ತಜ್ಞ ಎನಿಸಿಕೊಳ್ಳುವವರು ಇದಕ್ಕೆ ಬಲಿಯಾದರೆ ಅದಕ್ಕಿಂತ ದೊಡ್ಡ ದುರಂತ ಇನ್ನೊಂದಿಲ್ಲ!

–ಡಾ. ಸುಧಾ ಕೆ., ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.