ADVERTISEMENT

ಭಟ್ಟಂಗಿ ಪಕ್ಷಕ್ಕೆ ಭವಿಷ್ಯವಿಲ್ಲ!

ಪ್ರೊ ಆರ್‌ ವಿ ಹೊರಡಿ ಧಾರವಾಡ
Published 27 ಮೇ 2016, 19:50 IST
Last Updated 27 ಮೇ 2016, 19:50 IST

ಅತ್ಯಂತ ಹಳೆಯ ಮತ್ತು ರಾಷ್ಟ್ರೀಯ ಪಕ್ಷವೆಂಬ ಹೆಗ್ಗಳಿಕೆಯ ಕಾಂಗ್ರೆಸ್‌, ಭಾರತ ಒಕ್ಕೂಟದ ಒಂದೊಂದೇ ರಾಜ್ಯವನ್ನು ಕಳೆದುಕೊಳ್ಳುತ್ತಿರುವುದು ‘ಬಹುತ್ವ ಸಿದ್ಧಾಂತ ರಾಜಕೀಯ ವ್ಯವಸ್ಥೆ’ಯಲ್ಲಿ ನಂಬುಗೆ ಇರಿಸಿಕೊಂಡಿರುವ ನಮ್ಮಂಥವರಿಗೆ ಸಂತೋಷದ ವಿಷಯವೇನಲ್ಲ.

ಆದರೆ, ನೆಹರೂ–ಇಂದಿರಾ ಗಾಂಧಿ ಕುಟುಂಬ ನಿಷ್ಠೆಯ ದಾಸ ಪರಂಪರೆಯಿಂದ ಸೋನಿಯಾ–ರಾಹುಲರ ಸ್ತುತಿ ಪಾಠಕತ್ವದಿಂದ, ಮಿತಿಮೀರಿದ ಭಟ್ಟಂಗಿತನದಿಂದ ಕಾಂಗ್ರೆಸ್‌ ಪಕ್ಷ ಮುಕ್ತಿ ಪಡೆಯದ ವಿನಾ ನರೇಂದ್ರ ಮೋದಿಯವರ ‘ಕಾಂಗ್ರೆಸ್‌ ಮುಕ್ತ ಭಾರತದ ನಿರೀಕ್ಷೆ’ ನಿಜವಾಗುವುದರಲ್ಲಿ ಸಂದೇಹವಿಲ್ಲ! ಆತ್ಮ ನಿರೀಕ್ಷಣೆ ಮಾಡಿಕೊಳ್ಳದಿದ್ದರೆ ಕಾಂಗ್ರೆಸ್‌ಗೆ ಖಂಡಿತ ಭವಿಷ್ಯವಿಲ್ಲ! ತಡವಾದರೂ ತಿದ್ದಿಕೊಳ್ಳಬೇಕು!

ಈಗಲೂ ಕಾಲ ಮಿಂಚಿಲ್ಲ! ನೆಹರೂ–ಇಂದಿರಾ ಗಾಂಧಿ ವಂಶಾವಳಿಯ ನಾಮಾವಳಿಯ ಬಳುವಳಿಗೆ  ಬ್ರೇಕ್‌ ಹಾಕಬೇಕು! ನೆಹರೂ, ಇಂದಿರಾ, ರಾಜೀವ್‌, ಸೋನಿಯಾರನ್ನು ಹೊರತುಪಡಿಸಿ, ಭಾರತದ ಸ್ವಾತಂತ್ರ್ಯ ಸಮೃದ್ಧಿಗಾಗಿ ಶ್ರಮಿಸಿದ ರಾಷ್ಟ್ರೀಯ ನಾಯಕರ ಹೆಸರು ಕಾಂಗ್ರೆಸ್‌ ಜನರಿಗೆ ನೆನಪಾಗುವುದಿಲ್ಲವೇ?

ವಿಜ್ಞಾನಿಗಳ, ವೀರಯೋಧರ, ವಿದ್ವಾಂಸರ, ವಿಚಾರವಾದಿಗಳ ಕೊಡುಗೆಯನ್ನು ಕಡೆಗಣಿಸುವುದೇಕೆ? ಸಾರ್ವಜನಿಕ ಸೊತ್ತಿಗೆ, ಸರ್ಕಾರಿ ಯೋಜನೆಗಳಿಗೆ, ಕ್ರೀಡಾಂಗಣ, ರಸ್ತೆ, ಪ್ರಶಸ್ತಿಗಳಿಗೆ ರಾಜೀವ್‌, ಸಂಜಯ್‌,

ಇಂದಿರಾ ಹೆಸರು ಬಿಟ್ಟು ಬೇರೆ ಹೆಸರು ಹೊಳೆಯುವುದೇ ಇಲ್ಲವೇ? ಜೀತಪದ್ಧತಿಯನ್ನು ಕಾನೂನು ರದ್ದುಗೊಳಿಸಿದ್ದರೂ ಕಾಂಗ್ರೆಸ್‌ನಲ್ಲಿ ಅದಿನ್ನೂ ಜೀವಂತವಾಗಿರುವುದು ವಿಷಾದಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.