ADVERTISEMENT

ಮಕ್ಕಳ ಸಾಹಿತ್ಯ: ಅನಿಸಿಕೆ ಎಷ್ಟು ಸರಿ?

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2014, 19:30 IST
Last Updated 19 ನವೆಂಬರ್ 2014, 19:30 IST

ಮಕ್ಕಳ ಸಾಹಿತ್ಯ ಕುರಿತು ಬೆಂಗಳೂರಿನಲ್ಲಿ  ನಡೆದ ವಿಚಾರ ಸಂಕಿರಣವೊಂದರಲ್ಲಿ  ಚಂದ್ರಶೇಖರ ಕಂಬಾರ ಅವರು ‘ಕನ್ನಡದಲ್ಲಿ ಕುವೆಂಪು ಅವರನ್ನು ಹೊರತು­ಪಡಿಸಿದರೆ ಬೇರೆ ಯಾವ ಸಾಹಿತಿಯೂ ಮಕ್ಕಳಿಗಾಗಿ ಕೃತಿ ರಚಿಸುವ ಬದ್ಧತೆ ತೋರಿಲ್ಲ...’ ಎಂದು ಹೇಳಿದ್ದಾರೆ (ಪ್ರ.ವಾ., ನ.17). ಅವರ ಈ ಅನಿಸಿಕೆ ಎಷ್ಟರಮಟ್ಟಿಗೆ ಸರಿ?

ಪಂಜೆ ಮಂಗೇಶರಾವ್,  ಜಿ.ಪಿ. ರಾಜರತ್ನಂ, ಶಿವ­ರಾಮ ಕಾರಂತ, ನಾ. ಡಿಸೋಜ, ಎಚ್.ಎಸ್. ವೆಂಕಟೇಶ­ಮೂರ್ತಿ ಹೀಗೆ ಹಲವಾರು ಲೇಖಕರು ಮಕ್ಕಳ ಸಾಹಿತ್ಯಕ್ಕೆ ಕೊಟ್ಟ ಕೊಡುಗೆಯನ್ನು ಹೀಗೆ ಸಾರಾಸಗಟಾಗಿ ತಳ್ಳಿ ಹಾಕುವುದು ಸರಿಯೇ? ನಿರಂಜನ ಅವರು ಸಂಪಾದಿಸಿದ ಜ್ಞಾನಗಂಗೋತ್ರಿಯ 7 ಸಂಪುಟ­ಗಳು, ಐ.ಬಿ.ಎಚ್. ಪ್ರಕಾಶನ ಸಂಸ್ಥೆ ಪ್ರಕಟಿಸಿದ ಮಕ್ಕಳ ಪುಸ್ತಕಗಳು, ಕಾರಂತರ ಕೊಡುಗೆ  ಇವೆಲ್ಲವನ್ನೂ ಹೇಗೆ ಮರೆಯಲು ಸಾಧ್ಯ? ಇಂಥ ಪುಸ್ತಕಗಳನ್ನು ಹೊಸ ತಂತ್ರಜ್ಞಾನ ಬಳಸಿ ಇಂದಿನ ಮಕ್ಕಳಿಗೆ ತಲುಪುವಂತೆ ಮಾಡಬೇಕು.

‘ಇಂದು ಹಕ್ಕಿಗಳ ಚಿಲಿಪಿಲಿ ಜಾಗದಲ್ಲಿ  ಮೊಬೈಲ್ ರಿಂಗ್ ಟೋನ್ ಅಷ್ಟೇ ಕೇಳಿಸುತ್ತಿದೆ’ ಎಂದು ಮಲಯಾಳಿ ಸಾಹಿತಿ ಕೆ.ವಿ.ರಾಮನಾಥನ್‌ ವ್ಯಕ್ತಪಡಿಸಿ­ರುವ ವಿಷಾದಕ್ಕಿಂತ (ಪ್ರ.ವಾ., ನ. 16) ಇದು ಹೆಚ್ಚು ಸೂಕ್ತ. ಇರುವ ಒಳ್ಳೆಯ ಸಾಹಿತ್ಯವನ್ನು ಹೆಕ್ಕಿ  ಅದನ್ನು ಹೆಮ್ಮೆಯಿಂದ ಪಠ್ಯಪುಸ್ತಕಗಳಲ್ಲಿ, ಇಂಟರ್ ನೆಟ್ ಮೊದಲಾದ ಮಾಧ್ಯಮಗಳಲ್ಲಿ ಸುಲಭವಾಗಿ ದಕ್ಕು­ವಂತೆ ಮಾಡುವುದು ಮತ್ತು ಮಕ್ಕಳ ಸಾಹಿತ್ಯ ಬರೆ­ಯುತ್ತಿರುವವರಿಗೆ ಪ್ರೋತ್ಸಾಹ ಕೊಡುವುದು  ಈಗ ತುರ್ತಾಗಿ ಆಗಬೇಕಾದ ಕೆಲಸ.
–ಸಿ.ಪಿ. ರವಿಕುಮಾರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.