ADVERTISEMENT

ಮರೆವು ಮದ್ದಲ್ಲ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 19:30 IST
Last Updated 22 ಮಾರ್ಚ್ 2018, 19:30 IST

‘ಇತಿಹಾಸವನ್ನು ಮರೆತು ಮುನ್ನಡೆಯೋಣ’ (ವಾ.ವಾ.,ಮಾ.21) ಎಂಬ ಸಲಹೆಯನ್ನು ಗಿರೀಶ್ ವಿ. ವಾಘ್ ನೀಡಿದ್ದಾರೆ. ಅದನ್ನು ಸಮರ್ಥಿಸಲು ಫ್ರೆಂಚ್ ವಿದ್ವಾಂಸ ಅರ್ನೆಸ್ಟ್ ರೆನಾನ್, ದೆಹಲಿಯ ದಿವಂಕರ್ ಗುಪ್ತ ಮತ್ತಿತರ ಬರಹಗಾರರನ್ನು ಉದಾಹರಿಸಿದ್ದಾರೆ. ಅವರ ಪ್ರಕಾರ, ‘ಸಮುದಾಯವೊಂದು ರಾಷ್ಟ್ರವಾಗಿ ರೂಪುಗೊಳ್ಳಲು ತನ್ನ ಗತವನ್ನು ಮರೆಯುವ ಅಗತ್ಯ ಇದೆ’.

‘ದೇಶ ವಿಭಜನೆಯ ಕಾಲದಲ್ಲಿ ನಡೆದ ಕೋಮು ಗಲಭೆ, ಹಿಂದೂ ಸಮಾಜದ ಮೇಲೆ ಮುಸ್ಲಿಂ ದೊರೆಗಳ ದೌರ್ಜನ್ಯ ಇವುಗಳನ್ನು ಭವಿಷ್ಯದ ಸಾಮರಸ್ಯದ ದೃಷ್ಟಿಯಿಂದ ಮರೆತುಬಿಡಬೇಕು’ ಎಂಬ ವಾದವನ್ನು ಒಪ್ಪಿದ್ದೇ ಆದರೆ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ದಲಿತರ ಮತ್ತು ಮುಸ್ಲಿಮರ ಮೇಲಿನ ದೌರ್ಜನ್ಯಗಳನ್ನೂ ಮರೆಯಬೇಕಾಗುತ್ತದೆ. ಇತಿಹಾಸವನ್ನು ಮರೆಯುವುದಾದರೆ ಇತಿಹಾಸದ ಪಾಠಗಳೇ ಆದ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ಅವರನ್ನೂ ಅವರ ಆಲೋಚನೆ, ಸಿದ್ಧಾಂತಗಳನ್ನೂ ಮರೆತುಬಿಡಬೇಕಲ್ಲವೇ? ಇಲ್ಲದಿದ್ದರೆ ನಮ್ಮದು ಆಯ್ದ ನೆನಪುಗಳ (ಸೆಲೆಕ್ಟಿವ್ ಮೆಮೊರಿ) ಇತಿಹಾಸವಾಗುವುದಿಲ್ಲವೇ? ಹಾಗೇ, ಇತಿಹಾಸದ ಕೆಲವು ಅಂಶಗಳನ್ನಷ್ಟೇ ಮರೆತು, ಕೆಲವನ್ನು ಸ್ಮರಣೆಯಲ್ಲಿಟ್ಟುಕೊಳ್ಳಬೇಕೆಂದಾದರೆ ಉಳಿಸಿಕೊಳ್ಳಬೇಕಾದ, ಅಳಿಸಬೇಕಾದ ನೆನಪುಗಳಾವುವು ಎಂಬುದನ್ನು ನಿರ್ಧರಿಸುವವರು ಯಾರು?

ರಾಷ್ಟ್ರ ನಿರ್ಮಾಣಕ್ಕೆ ಬೇಕಿರುವುದು ನಾಗರಿಕ ಮಾನವಪ್ರಜ್ಞೆ. ಅದರ ಸಂಪೂರ್ಣ ದೋಷ- ಹಿರಿಮೆಗಳ ಸಮೇತ ನಮ್ಮ ನೆಲದ ಸಂಸ್ಕೃತಿಯ ಅರಿವು. ಅಂತಹ ಪ್ರಜ್ಞೆಗಾಗಿ ನಾವು ಜಾತಿ, ಧರ್ಮಗಳನ್ನು ಮೀರಿ ಬೆಳೆಯಬೇಕಾಗುತ್ತದೆ. ದುರಂತವೆಂದರೆ, ಶತಮಾನಗಳ, ಸಹಸ್ರಮಾನಗಳ ಹಿಂದಿನ ಸಮಾಜಗಳಿಗಾಗಿ ರೂಪುಗೊಂಡ ಧರ್ಮ ಮತ್ತು ಜಾತಿ ವ್ಯವಸ್ಥೆಗಳು ಇಂದಿನ ವೈಜ್ಞಾನಿಕ ಯುಗದ ನಮ್ಮನ್ನೂ ಆಳುತ್ತಿರುವುದು. ನಮ್ಮ ದೇಶದ ಇಂದಿನ ರಾಜಕೀಯ- ಸಾಮಾಜಿಕ ಪರಿಸ್ಥಿತಿಯು ಪ್ರತಿ ಹೆಜ್ಜೆಗೂ ನಮ್ಮ ಜಾತಿ ಮತ್ತು ಧರ್ಮವನ್ನು ನೆನಪಿಸುತ್ತದೆ. ಈ ಬಗೆಯ ಸಂಘರ್ಷಗಳ ಬಗ್ಗೆ ವಸಾಹತು ಕಾಲದಲ್ಲಿಯೇ ‘ಎ ಪ್ಯಾಸೇಜ್ ಟು ಇಂಡಿಯಾ’ ಎಂಬ ಕಾದಂಬರಿಯಲ್ಲಿ ಬರೆದ ಹೆಸರಾಂತ ಆಂಗ್ಲ ಲೇಖಕ ಇ.ಎಂ. ಫಾರ್ಸ್ಟರ್ ತನ್ನ ‘ಟಾಲರೆನ್ಸ್’ ಪ್ರಬಂಧದಲ್ಲಿ ಧರ್ಮಗಳ ನಡುವೆ, ಜನರ ನಡುವೆ ಸಾಮರಸ್ಯ ಮೂಡಬೇಕೆಂದರೆ ಏನು ಮಾಡಬೇಕೆಂದು ಚರ್ಚಿಸುತ್ತಾನೆ. ಪ್ರೇಮದಿಂದ ಇದು ಸಾಧ್ಯವಾಗುವುದಿಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಾನೆ. ಯಾಕೆಂದರೆ ಎಲ್ಲರಿಗೂ ಇತರರನ್ನು, ಅನ್ಯರನ್ನು ಪ್ರೀತಿಸಲಾಗಲಿ, ಪ್ರೇಮಿಸಲಾಗಲಿ ಸಾಧ್ಯವಿಲ್ಲ. ಜನರ ನಡುವೆ ಸಾಮರಸ್ಯ ಮೂಡಬೇಕಾದರೆ ಪ್ರೇಮಕ್ಕಿಂತ ಹೆಚ್ಚಾಗಿ ಸಹಿಷ್ಣುತೆ ಇರಬೇಕೆಂದು ಆತ ಬರೆಯುತ್ತಾನೆ.

ADVERTISEMENT

ಹಾಗಾಗಿ ಇತಿಹಾಸವನ್ನು ಮರೆಮಾಚುವುದು, ಮರೆತುಬಿಡುವುದು ದೇಶವನ್ನು ಕಟ್ಟುವುದಿಲ್ಲ. ಇತಿಹಾಸವನ್ನೇ ಅಳಿಸಿಬಿಡಬೇಕೆಂದರೆ ಬಾಲಿಶವಾಗುತ್ತದೆ. ಸೂರ್ಯ ಪ್ರಕಾಶ್ ಅವರ ಲೇಖನದಲ್ಲಿನ ಮಾತು ‘ಸೆಕ್ಯುಲರ್ ಭಾರತಕ್ಕೆ ಸತ್ಯ ಗೊತ್ತಿರಬೇಕು. ಅದರ ಜೊತೆ ಸಹಬಾಳ್ವೆ ರೂಢಿಸಿಕೊಳ್ಳಬೇಕು’ ಎಂಬುದು ಉಚಿತ ಎನಿಸುತ್ತದೆ.

-ಚಂದನ್, ಚನ್ನಪಟ್ಟಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.