ADVERTISEMENT

ಮಾದರಿ ಹಳ್ಳಿಗಳು

ಕೆ.ಸಿ.ರತ್ನಶ್ರೀ ಶ್ರೀಧರ್‌
Published 19 ಏಪ್ರಿಲ್ 2018, 19:30 IST
Last Updated 19 ಏಪ್ರಿಲ್ 2018, 19:30 IST

ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಎರಡು ಹಳ್ಳಿಗಳಲ್ಲಿ ಅಲ್ಲಿನ ಜನರೇ ಮದ್ಯ ನಿಷೇಧ ಮಾಡಿರುವ ಸುದ್ದಿಯನ್ನು ಓದಿ, ಆ ಹಳ್ಳಿಗಳಲ್ಲಿನ ವ್ಯವಸ್ಥೆಯ ಬಗ್ಗೆ ತಿಳಿದು ಹೆಮ್ಮೆ ಎನಿಸಿತು.

ಮದ್ಯ ಮಾರಾಟ ಅಥವಾ ಸರಬರಾಜು ಮಾಡಿದರೆ ದಂಡ ವಿಧಿಸುವುದು, ಮದ್ಯ ಸೇವಿಸಿ ಯಾರೂ ಗ್ರಾಮದೊಳಗೆ ಕಾಲಿಡದಂತೆ ದಿಗ್ಬಂಧನ ವಿಧಿಸಿರುವುದು ಮತ್ತು ಚುನಾವಣೆಯ ಸಮಯದಲ್ಲಿ ಈ ಕ್ರಮ ಇನ್ನೂ ಬಿಗಿಯಾಗುವುದರಿಂದಾಗಿ ಆ ಗ್ರಾಮಗಳು ಮಾದರಿ ಗ್ರಾಮಗಳಾಗಿವೆ ಎಂದೆನಿಸುತ್ತದೆ. ಅಲ್ಲಿಯ ಹಿರಿಯರು ತೆಗೆದುಕೊಂಡ ತೀರ್ಮಾನವು ಯುವಜನರಿಗೂ ಸರಿಯಾದ ದಾರಿಯಲ್ಲಿ ನಡೆಯಲು ಪೇರಣೆಯಾಗಿದೆ. ಇದೇ ಕ್ರಮವನ್ನು ಅನುಸರಿಸಿದರೆ ನಮ್ಮ ಎಲ್ಲಾ ಗ್ರಾಮಗಳು ಉದ್ಧಾರವಾಗುವುದರಲ್ಲಿ ಅನುಮಾನವಿಲ್ಲ.

ಬಹಳಷ್ಟು ಹಳ್ಳಿಗಳಲ್ಲಿ, ಸಂಜೆಯಾದರೆ ಸಾಕು ದಿನವೆಲ್ಲಾ ದುಡಿದ ಹಣವನ್ನು ಗಂಡಸರು ಮದ್ಯದ ಅಂಗಡಿಯಲ್ಲಿ ಸುರುವಿ, ಪಾನಮತ್ತರಾಗಿ ಬಂದು ಮನೆಗಳಲ್ಲಿ ಗಲಾಟೆ ಎಬ್ಬಿಸುವ ಸಂಗತಿ ಸಾಮಾನ್ಯವೆಂಬಂತಾಗಿದೆ. ಹೀಗಾಗಿ ಅದೆಷ್ಟೋ ಮನೆಗಳು ಸಂಕಷ್ಟ ಅನುಭವಿಸುತ್ತಿವೆ. ಹಳ್ಳಿಗಳಲ್ಲಿ ಕೂಲಿ ಕೆಲಸ ಮಾಡುವ ಅನೇಕರು ತಮ್ಮ ಹಳ್ಳಿಗಳಲ್ಲಿ ಮದ್ಯದಂಗಡಿ ಇಲ್ಲದಿದ್ದರೆ ಪಕ್ಕದ ಹಳ್ಳಿಗೆ ಹೋಗುತ್ತಾರೆ. ಚುನಾವಣೆಯ ಸಮಯದಲ್ಲಿ ಎಲ್ಲೆಲ್ಲೂ ಕುಡುಕರದೇ ಕಾರುಬಾರು. ಈ ಸ್ಥಿತಿ ಬದಲಾಗಬೇಕು. ಯಳಂದೂರು ತಾಲ್ಲೂಕಿನ ಹಳ್ಳಿಗಳನ್ನು ನೋಡಿಯಾದರೂ ನಮ್ಮ ಜನರಲ್ಲಿ ಜಾಗೃತಿ ಮೂಡಲೆಂದು ಆಶಿಸೋಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.