ADVERTISEMENT

ಮೂಕನಿಗೆ ಬಾಯಿ ಬಂದಿದೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2014, 19:30 IST
Last Updated 22 ಡಿಸೆಂಬರ್ 2014, 19:30 IST

ಭಾರತೀಯ  ಸಂವಿಧಾನಕ್ಕೆ ೬೪ ವರ್ಷಗಳು ತುಂಬಿದ ಸಮಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವಸಂತ ತುಂಬುತ್ತಿದೆ.
ಇಂತಹ ಐತಿಹಾಸಿಕ ಸಂದರ್ಭದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಎಂದು ನೊಂದವರ ಸಾಹಿತ್ಯದ ಪ್ರತಿನಿಧಿ  ದೇವನೂರ ಮಹಾ­ದೇವ ಅವರ ಮನೆಗೆ ಕಸಾಪ  ಅಧ್ಯಕ್ಷ ಪುಂಡಲೀಕ ಹಾಲಂಬಿಯವರು  ಹೋದದ್ದು  ಸರಿ­ಯಾಗಿದೆ.

ದುರಂತವೆಂದರೆ ಕಸಾಪ ಮಾಜಿ ಅಧ್ಯಕ್ಷ ಪ್ರೊ. ಚಂಪಾ ಅವರು ‘ಹಾಲಂಬಿ ಅವರೇ ಮನೆಗೆ ಹೋಗಿ ಆಹ್ವಾನಿ­ಸುವ ಅಗತ್ಯವಿರಲಿಲ್ಲ’ ಎನ್ನುತ್ತಾರೆ (‘ದೇವನೂರರ ಅತಿರೇಕ ನಿಲುವು-’, ಪ್ರ.ವಾ., ಡಿ. ೨೧). ಸಾಹಿತ್ಯಕ ವಲಯದ ಸಾಮಾಜಿಕ ನ್ಯಾಯದ ಆಹ್ವಾನಕ್ಕೆ ದೇವನೂರರು ತಮ್ಮದೇ ಧಾಟಿಯಲ್ಲಿ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕಾಗಿ ಒತ್ತಾಯಿಸಿ ಆ ಆಹ್ವಾನವನ್ನು ತಿರಸ್ಕರಿಸಿದರು.

ಅಲ್ಲದೇ 1ರಿಂದ ೧೦ನೇ ತರಗತಿವರೆಗೆ ಕನ್ನಡ ಮಾಧ್ಯಮ ಶಿಕ್ಷಣ ಜಾರಿಗೊಳಿಸಲು ಪರಿಷತ್‌ ಬೀದಿ­ಗಿಳಿಯಲಿ ಎಂದೂ ದೇವನೂರರು ಕಸಾಪಕ್ಕೇ ಒಂದು ನಿರ್ದಿಷ್ಟ ಕಾರ್ಯಕ್ರಮ ಕೊಟ್ಟರು. ಆ ಮೂಲಕ ಸಮ್ಮೇಳನದ ಅಧ್ಯಕ್ಷಗಿರಿ ತಿರಸ್ಕರಿಸಿಯೂ ದೇವನೂರರು  ಕನ್ನಡ ಕಳಕಳಿಯ ಜೀವಪರ ನಿಲುವು ತಳೆದರು.

ಪ್ರಶ್ನೆಯೇನೆಂದರೆ ದೇವನೂರರ ಇಂತಹ ನಿಲುವು ಅತಿರೇಕದ ನಿಲುವು ಹೇಗಾ­ಗುತ್ತದೆ? ಅದೇ ಮಾತುಕತೆಯಲ್ಲಿ ವರಕವಿ ಬೇಂದ್ರೆ ಅವ­ರನ್ನು ‘ಸಣ್ಣ ಮನುಷ್ಯ, ಜಾತಿವಾದಿ, ಪುರೋಹಿತ­ಶಾಹಿ’ ಎಂದಿರುವ ಚಂಪಾ, ತಾವೇ ಕಸಾಪ ಅಧ್ಯಕ್ಷ­ರಾಗಿದ್ದಾಗ ನಡೆಸಿದ ಸಾಹಿತ್ಯ ಸಮ್ಮೇಳನಗಳಲ್ಲಿ ದಲಿತರನ್ನು ಅಧ್ಯಕ್ಷರ­ನ್ನಾಗಿ ನಿಯುಕ್ತಿಗೊಳಿಸಲಿಲ್ಲ!

ಹಾಗೆಯೇ ಬೇಂದ್ರೆ­ಯವರನ್ನು ವೈಯಕ್ತಿಕವಾಗಿ ಜಾತಿವಾದಿ­ಯಾಗಿದ್ದರು ಎಂದಿರುವ ಪ್ರಗತಿಪರರಾದ ಚಂಪಾ ಅವರು ಪ್ರಗತಿಪರತೆಯ ಅಂತಹ ಪ್ರಮುಖ ಲಕ್ಷಣ­ವಾದ ಸಾಮಾಜಿಕ ನ್ಯಾಯವನ್ನು ತಮ್ಮ ಅವಧಿಯ ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಎತ್ತಿಹಿಡಿಯಲಿಲ್ಲ!   
ನಿಜ ಹೇಳಬೇಕೆಂದರೆ ಈ ಬಾರಿ ಮೂಕನಿಗೆ ಬಾಯಿ ಬಂದಿದೆ. ಈ ನಿಟ್ಟಿನಲ್ಲಿ ಅಂತಹ ಮೂಕರ ಮಾತು­ಗಳನ್ನು ಪ್ರತಿಯೊಬ್ಬರೂ ಗೌರವಿಸಲಿ.
   –ರಘೋತ್ತಮ ಹೊ.ಬ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.