ADVERTISEMENT

ಯೋಧರ ದುಃಸ್ಥಿತಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2017, 19:30 IST
Last Updated 11 ಜನವರಿ 2017, 19:30 IST

ದೇಶ ರಕ್ಷಣೆಗಾಗಿ ಗಡಿ ನಿಯಂತ್ರಣ ರೇಖೆ ಬಳಿ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಪ್ರತಿನಿತ್ಯ 11 ಗಂಟೆ ಕೆಲಸ ಮಾಡುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿರುವುದು (ಪ್ರ.ವಾ., ಜ. 11) ನಿಜಕ್ಕೂ ಆತಂಕದ ವಿಚಾರ. ಸೈನಿಕರಿಗೆ ಯಾವುದೇ ವಿಧದಲ್ಲಿ ತೊಂದರೆಯಾಗುತ್ತಿದ್ದರೂ ಅದು ಸಹಿಸಲಸಾಧ್ಯ.

ಅಷ್ಟಕ್ಕೂ ಇಂತಹ ಗುರುತರ ಆರೋಪವನ್ನು ಬೇರೆ ಯಾರೋ ಮಾಡಿಲ್ಲ. ತೇಜ್ ಬಹದ್ದೂರ್ ಯಾದವ್‌ ಎನ್ನುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧನೇ ಮಾಡಿರುವುದು. ಯೋಧರು ಸುಭಿಕ್ಷವಾಗಿದ್ದರೆ ತಾನೆ ದೇಶ ಸುಭಿಕ್ಷವಾಗಿರಲು ಸಾಧ್ಯ?  ಕೇಂದ್ರ ಸರ್ಕಾರ ಯೋಧರಿಗೆ ನೀಡುವ ಊಟಕ್ಕೂ ಕನ್ನ ಹಾಕುವ ಅಧಿಕಾರಿ ವರ್ಗದವರು ಇದ್ದಾರೆಂದರೆ ಅದಕ್ಕಿಂತ ವಿಪರ್ಯಾಸ ಬೇರೊಂದಿಲ್ಲ.

ಒಣ ಪರೋಟ, ಬೇಳೆ ಇಲ್ಲದ ಸಾರು, ಒಣ ರೊಟ್ಟಿ ಕೊಡುತ್ತಾರೆ ಎಂದು ಯಾದವ್‌ ಫೇಸ್‌ಬುಕ್‌ನಲ್ಲಿ ಆರೋಪಿಸಿದ್ದಾರೆ. ಇದು ನಿಜವೇ ಆಗಿದ್ದಲ್ಲಿ, ನಮ್ಮ ಯೋಧರಿಗೆ ತಮ್ಮ ನೋವನ್ನು ಹೇಳಿಕೊಳ್ಳುವಂತೆಯೂ ಇಲ್ಲ, ಅನುಭವಿಸುವಂತೆಯೂ ಇಲ್ಲ ಎಂಬಂತಹ  ದುಃಸ್ಥಿತಿ ಇದೆ ಎಂದಾಯಿತು.

ಯೋಧರನ್ನು ಇಂಥ ಶೋಚನೀಯ ಸ್ಥಿತಿಗೆ ತಂದೊಡ್ಡುವ ಅಧಿಕಾರಿಗಳಿಗೆ ಶಿಕ್ಷೆ ನೀಡುವವರಾರು? ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಲೇಬೇಕು ಎಂಬ ಕೂಗು ಎಲ್ಲೆಡೆ ಮೊಳಗುವಂತಾಗಬೇಕು. ನಮ್ಮ ಸೈನಿಕರಿಗೆ ಶತ್ರುಗಳ ಸಮಸ್ಯೆ ಮಾತ್ರ ಸಾಕು. ಬೇರೆ ಯಾವ ಸಮಸ್ಯೆಗಳೂ ಅವರ ಬಳಿ ಸುಳಿಯದಂತೆ ನೋಡಿಕೊಳ್ಳಬೇಕಾದುದು ಎಲ್ಲರ ಕರ್ತವ್ಯ.
-ರವಿಚಂದ್ರ ಬಾಯರಿ, ಕೊಕ್ಕರ್ಣೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT