ADVERTISEMENT

ರಂಗಭೂಮಿಯ ಮಹತ್ವ...

​ಪ್ರಜಾವಾಣಿ ವಾರ್ತೆ
Published 18 ಮೇ 2017, 19:30 IST
Last Updated 18 ಮೇ 2017, 19:30 IST

ರಂಗಭೂಮಿ ಮೂಲಕ ಶಿಕ್ಷಣ ನೀಡುವುದು ಕಲಿಕೆಯ ದೃಷ್ಟಿಯಿಂದ ಸೂಕ್ತ ಎನ್ನುವುದು ಅನೇಕ ರಂಗತಜ್ಞರ ಅಭಿಪ್ರಾಯ ಮತ್ತು ಪ್ರಯೋಗದಿಂದ ಕಂಡುಕೊಂಡಿರುವ ಸತ್ಯ. ದೆಹಲಿಯಲ್ಲಿ  ಮಕ್ಕಳಿಗಾಗಿಯೇ ಎನ್‌.ಎಸ್‌.ಡಿ. ರಂಗತರಬೇತಿ ನೀಡುತ್ತದೆ. ರಾಜ್ಯದಲ್ಲಿ ಅಲ್ಲಲ್ಲಿ ಮೊದಲಿನಿಂದಲೂ ಮಕ್ಕಳಿಗಾಗಿ ರಂಗಚಟುವಟಿಕೆಗಳು ನಡೆಯುತ್ತಿದ್ದವು. ಕೆ.ಜಿ. ಕೃಷ್ಣಮೂರ್ತಿ, ಐ.ಕೆ. ಬೊಳುವಾರು, ಎ.ಎಸ್. ಮೂರ್ತಿ ಮುಂತಾದವರೆಲ್ಲ ಈ ನಿಟ್ಟಿನಲ್ಲಿ ಅಗಾಧ ಕೆಲಸ ಮಾಡಿದವರು. ರಂಗಾಯಣದಲ್ಲಿ ಕಾರಂತರು ನಿರ್ದೇಶಿಸಿದ ‘ಬೊಮ್ಮನಹಳ್ಳಿ ಕಿಂದರಿ ಜೋಗಿ’ಯಿಂದ ಪ್ರೇರಣೆಗೊಂಡು ಆರಂಭಗೊಂಡ ಮೈಸೂರಿನ ಚಿಣ್ಣರ ಮೇಳ, ಬಸವಲಿಂಗಯ್ಯನವರ ನೇತೃತ್ವದಲ್ಲಿ ಮಕ್ಕಳ ರಂಗಭೂಮಿಗೆ ಸಂಬಂಧಿಸಿದಂತೆ ಹೊಸ ಶಕೆಯನ್ನೇ ಆರಂಭ ಮಾಡಿತು.

ಮಕ್ಕಳಿಗಷ್ಟೇ ಅಲ್ಲ ದೊಡ್ಡವರ ಕಲಿಕೆಗೆ, ಶಿಕ್ಷಕರ ಕಲಿಕೆಗೆ ರಂಗಭೂಮಿ ಇಂದು ಅತ್ಯವಶ್ಯಕ. ಕಳೆದ ವರ್ಷ ಜೀ ಟಿ.ವಿ.ಯಲ್ಲಿ ಆರಂಭವಾದ ಡ್ರಾಮಾ ಜ್ಯೂನಿಯರ್ಸ್,  ಇಡೀ ರಾಜ್ಯದಲ್ಲಿ ಮಕ್ಕಳ ಪ್ರತಿಭೆಯನ್ನು ಮನೆಮಾತು ಮಾಡಿತು. ನಮ್ಮ ಮಕ್ಕಳೂ ಹೀಗೇ ಆಗಬೇಕೆಂಬ ಪೋಷಕರ ಒತ್ತಾಯಕ್ಕೆ ಪ್ರೇರಕವಾಯಿತು. ಇದು ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಿಂದ ಉತ್ತಮ ನಡೆ. ಒಂದು ತಿಂಗಳಿನಿಂದ ಅನೇಕ ರಂಗ ಗೆಳೆಯರು ರಾಜ್ಯದಾದ್ಯಂತ ಮಕ್ಕಳ ಮೇಳ ಮಾಡುತ್ತಿದ್ದಾರೆ. ರಂಗಕರ್ಮಿಗಳಾರಿಗೂ ಬಿಡುವೇ ಇಲ್ಲವೇನೋ ಎಂಬಷ್ಟು ಕೆಲಸಗಳಿವೆ. ಅಷ್ಟೊಂದು ಚೈತನ್ಯದಾಯಕವಾಗಿದೆ ಕನ್ನಡ ಮಕ್ಕಳ ರಂಗಭೂಮಿ. ಅವರೆಲ್ಲರ ಆಸೆಯೂ ಟಿ.ವಿ.ಯಲ್ಲಿ ಮಿಂಚಬೇಕು ಎಂಬುದೇ ಆಗಿದ್ದರೂ ಅದು ಆರೋಗ್ಯಕರವಾದ ಬೆಳವಣಿಗೆ.

ಮನುಷ್ಯನಿಗೆ ಮಗು ಮನಸ್ಸು ಇದ್ದಾಗ ಮಾನವೀಯತೆ ಮುಖ್ಯವಾಗುತ್ತದೆ.  ಸಾಮಾಜಿಕ ಪರಿಸರ ಕಲುಷಿತವಾಗುತ್ತಿರುವ ಈ ಹೊತ್ತಿನಲ್ಲಿ ಜಾತ್ಯತೀತವಾಗಿ ಬದುಕುವ ಮಕ್ಕಳ ಮುಗ್ಧತೆಯನ್ನು ಕಾಯ್ದುಕೊಳ್ಳಬೇಕಿದೆ.

ADVERTISEMENT

ಆಸ್ತಿ ಅಂತಸ್ತು, ಜಾತಿ ತಾರತಮ್ಯವಿಲ್ಲದಂತೆ ಬದುಕುವ ಮಕ್ಕಳನ್ನು ನಮ್ಮ ಪ್ರತಿಷ್ಠೆಯ ದಾಳಗಳನ್ನಾಗಿ, ಸಾಧನಗಳನ್ನಾಗಿ ನಾವೇ ಮಾಡಿಕೊಳ್ಳುತ್ತಿದ್ದೇವೆ.  ಮಕ್ಕಳ ಮುಗ್ಧತೆಯನ್ನು ತಿಳಿವಳಿಕೆ ಇಲ್ಲದ ವರ್ತನೆಗಳೆಂದು ನಾವೇ ನಿರ್ಧರಿಸಿ, ‘ಇವರ ಜತೆ ಸೇರಬೇಡ, ಅವನ ಜೊತೆ ಆಟ ಆಡಬೇಡ. ಇವಳ ಜತೆ ತಿಂಡಿ ಶೇರ್ ಮಾಡಿಕೋಬೇಡ’ ಎಂದು ನಿರ್ಬಂಧ ಹೇರುತ್ತ  ನಾವೇ ವಿಷವನ್ನು ಬಿತ್ತುತ್ತಿದ್ದೇವೆ.
ಆದರೆ  ಕುಬ್ಜತೆ ಮೀರುವ ವರ್ತನೆಗಳಿಗೆ ಚಿಣ್ಣರ ಮೇಳಗಳು ಸಾಕ್ಷಿಯಾಗಿವೆ. ರಂಗಭೂಮಿಯಿಂದ ಮಕ್ಕಳು ಆಟವಾಡುತ್ತಲೇ ಕಲಿಯುತ್ತಾರೆ. ಊಟ ಮಾಡದ ಮಗುವಿಗೆ ಅಮ್ಮ ಎಷ್ಟೋ ಕತೆಗಳನ್ನು ಹೇಳಿ ಉಣಿಸಿದ್ದನ್ನು ಮಗುವೇ ಮರೆಯುವ ಅದ್ಭುತ ಕಲೆಯಂತೆ ರಂಗಭೂಮಿ. ಅದಕ್ಕೆ ಅಂಥ ತಾಯ್ತನ ಇದೆ. ಉಣ್ಣದ ಮಗುವಿಗೆ ಅಪ್ಪ ಊಟ ಮಾಡಿಸಲಿ ನೋಡೋಣ, ಹೆಚ್ಚೆಂದರೆ ಕೋಪದಿಂದ ಏಟು ಕೊಡಬಹುದೇ ಹೊರತು ಉಣಿಸಲಾಗುವುದಿಲ್ಲ. ಚಿಣ್ಣರ ಮೇಳ, ಬೇಸಿಗೆ ಶಿಬಿರಗಳಲ್ಲಿ ಮಕ್ಕಳ ಮನಸ್ಸಿಗೆ ಅನೇಕ ತಿಳಿಯದ ಸಂಗತಿಗಳನ್ನು ಕಲಿಸಲಾಗುತ್ತಿದೆ. ಮತ್ತೊಂದು ಕಡೆ ಒಂದು ದೊಡ್ಡ ಧೈರ್ಯವನ್ನು ಸಹ ತುಂಬಲಾಗುತ್ತದೆ. ರಂಗವನ್ನೆದುರಿಸಿದರೆ ಬದುಕನ್ನು ಎದುರಿಸುವುದು ಸುಲಭ. ತಮ್ಮಲ್ಲೇ ಅಗಾಧ ಶಕ್ತಿ ಇರುವುದು ಮಕ್ಕಳ ಅರಿವಿಗೆ ಬರುತ್ತದೆ. ಮಣ್ಣು ಮುಟ್ಟಿದರೆ ಹೊಡೆಯುವ ಪೋಷಕರಿದ್ದಾರೆ. ಬಿದ್ದು ಒದ್ದಾಡುವ ಕಾಲಕ್ಕೆ ಮಣ್ಣೇನು? ಕಲ್ಲೇನು? ಮಕ್ಕಳಿಗೆ ಅವುಗಳ ಆಟವಷ್ಟೇ ಮುಖ್ಯ.

ರಾಜ್ಯ ಸರ್ಕಾರ, ಪ್ರಾಥಮಿಕ ಶಿಕ್ಷಣದಲ್ಲಿ ರಂಗಭೂಮಿಯ ಪೂರಕ ಜ್ಞಾನವನ್ನು ಅಳವಡಿಸಿದೆ. ಕೆಲವು ಶಾಲೆಗಳಲ್ಲಿ ಶಿಕ್ಷಕರನ್ನೂ ನೇಮಿಸಿದೆ. ಅಲ್ಲೆಲ್ಲ ವಿದ್ಯಾರ್ಥಿಗಳ ಚಟುವಟಿಕೆಗಳನ್ನು ನೋಡಲು ಆನಂದವಾಗುತ್ತದೆ.

ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಎಂ.ಎ. ತರಗತಿಗೆ ರಂಗಭೂಮಿ ವಿಷಯವನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿತ್ತು. ಆ ಮೂಲಕ ಸಮರ್ಥ ವಿದ್ಯಾರ್ಥಿಗಳು ಹೊರಹೊಮ್ಮಿರುವುದನ್ನು ಗಮನಿಸಬಹುದು. ಆದ್ದರಿಂದ ಸರ್ಕಾರ, ಶಿಕ್ಷಣದಲ್ಲಿ ರಂಗಭೂಮಿಯ ಮಹತ್ವವನ್ನು ಮನಗಾಣಬೇಕು.

–ಡಾ. ರಾಜಪ್ಪ ದಳವಾಯಿ, ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.