ADVERTISEMENT

ರಾಜಕೀಯ ಸುಳಿ...

​ಪ್ರಜಾವಾಣಿ ವಾರ್ತೆ
Published 1 ಮೇ 2015, 19:30 IST
Last Updated 1 ಮೇ 2015, 19:30 IST

‘ಗಿರೀಶ್ ಕಾರ್ನಾಡ್‌ ಅವರು ಗೋಮಾಂಸ ಸೇವನೆಯ ಪರವಾಗಿದ್ದಾರೆ ಎಂಬ ಕಾರಣ ಮುಂದಿಟ್ಟು ಅವರ ‘ನಾಗಮಂಡಲ’ ನಾಟಕ ಪ್ರದರ್ಶನಕ್ಕೆ ಮಣಿಪಾಲದ ಶ್ರೀ ನರಸಿಂಹ ದೇವಸ್ಥಾನದ ಆಡಳಿತ ಮಂಡಳಿ  ಅವಕಾಶ ನಿರಾಕರಿಸಿದೆ. ಹೀಗಾಗಿ ಆ ನಾಟಕ ಪ್ರದರ್ಶನ ನಡೆಯಲಿಲ್ಲ’ ಎಂದು ವರದಿಯಾಗಿದೆ (ಪ್ರ.ವಾ., ಮೇ 1).
ಇದನ್ನು ಓದಿದಾಗ ಆಡಳಿತ ಮಂಡಳಿಯ ಅಜ್ಞಾನ ಮತ್ತು ಮುಗ್ಧತೆಗೆ ಅಯ್ಯೋ ಅನಿಸಿತು. ಗೋವು ಮತ್ತು ಗೋಮಾಂಸ ಎಂಬುದು ಸಂಪೂರ್ಣ ರಾಜಕೀಯ ವಿಷಯವಾಗಿದೆ ಎಂದು ಗುರು ಗೋಲ್ವಾಲ್ಕರರೇ ‘ಅಮುಲ್’ ಸಂಸ್ಥೆಯ ಸ್ಥಾಪಕ ಡಾ. ವರ್ಗೀಸ್ ಕುರಿಯನ್‌ ಅವರಲ್ಲಿ ಒಪ್ಪಿಕೊಂಡಿರುವ ವಾಸ್ತವ ಇವರಿಗೆ ತಿಳಿದಿಲ್ಲ ಅನಿಸುತ್ತದೆ.

ಇದು ಕೆಲವು ವರ್ಷಗಳ ಹಿಂದಿನ ಮಾತಾಯಿತು. ಸಂಘ ಪರಿವಾರದ ಗೋ ರಾಜಕಾರಣವನ್ನು ಸ್ಪಷ್ಟವಾಗಿ ಬಯಲುಪಡಿಸುವ ಎರಡು ವಿದ್ಯಮಾನಗಳು ಇತ್ತೀಚೆಗೆ ನಡೆದಿವೆ. ಗೋವಾದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಆ ರಾಜ್ಯದಲ್ಲಿ ಗೋಮಾಂಸ ಸೇವನೆಯನ್ನು ನಿಷೇಧಿಸಿಲ್ಲ ಮಾತ್ರವಲ್ಲ ನಿಷೇಧಿಸುವುದೂ ಇಲ್ಲ ಎಂದು ತಿಳಿಸಿದೆ! ಗೋವಾದ ವಧಾಗೃಹವನ್ನು ನಡೆಸುತ್ತಿರುವ ಗೋವಾ ಮೀಟ್ ಕಾಂಪ್ಲೆಕ್ಸ್ ಒಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಇತ್ತೀಚೆಗೆ ಆ ರಾಜ್ಯದಲ್ಲಿ ಗೋಮಾಂಸದ ಕೊರತೆ ಕಂಡುಬಂದಾಗ ಇದೇ ಸಂಸ್ಥೆಯ ಮೂಲಕ ಸರ್ಕಾರವೇ ಖುದ್ದು ಗೋಮಾಂಸ ಮಾರಾಟ ಮಾಡಲು ಯೋಚಿಸಿತ್ತು. 

ಮೇಘಾಲಯ ರಾಜ್ಯದ ಬಿಜೆಪಿ ಘಟಕದ ಪ್ರತಿಪಾದನೆಯೂ ಇದೇ ಆಗಿದೆ.  ‘ಮೇಘಾಲಯದ ಬಹುಸಂಖ್ಯಾತ ಜನರು ಗೋಮಾಂಸ ಸೇವಿಸುವವರಾದ್ದರಿಂದ ರಾಜ್ಯದಲ್ಲಿ ಗೋಮಾಂಸ ಭಕ್ಷಣೆಯನ್ನು ನಿಲ್ಲಿಸಬಾರದೆಂಬುದು ಪಕ್ಷದ ಬಲವಾದ ಅಭಿಪ್ರಾಯ’ ಎಂದು ಅದು ಹೇಳಿದೆ! ಇಷ್ಟೆಲ್ಲ ಪುರಾವೆಗಳು ಇದ್ದರೂ ನರಸಿಂಹದೇವಸ್ಥಾನದ ಆಡಳಿತ ಮಂಡಳಿ ಮತ್ತು ಇತರ ಮುಗ್ಧ ಬೆಂಬಲಿಗರು ಗೋ ರಾಜಕೀಯದ ಸುಳಿಗೆ ಸಿಲುಕುತ್ತಿರುವುದು ವಿಷಾದಕರ.
- ಸುರೇಶ ಭಟ್ ಬಾಕ್ರಬೈಲು,
ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.