ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ: ರಾಜಕೀಯ ಅಲ್ಲವೇ?

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 20:08 IST
Last Updated 11 ಸೆಪ್ಟೆಂಬರ್ 2017, 20:08 IST
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ: ರಾಜಕೀಯ ಅಲ್ಲವೇ?
ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ: ರಾಜಕೀಯ ಅಲ್ಲವೇ?   

‘ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜಕೀಯ ಲಾಭದ ಉದ್ದೇಶವಿಲ್ಲ. ಎಲ್ಲರೂ ಒಟ್ಟಾಗಿ ಬಂದರೆ ಈ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಬಹುದು’ ಎಂದು ಲಿಂಗಾಯತ ಮುಖಂಡರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದಾಗಿ ವರದಿಯಾಗಿದೆ. ಇದು ಆಶ್ಚರ್ಯವೇ ಸರಿ. ಇಂದಿನ ಆಧುನಿಕ ಯುಗದಲ್ಲೂ ಒಂದು ಸ್ವತಂತ್ರ ಧರ್ಮ ಅಸ್ತಿತ್ವಕ್ಕೆ ಬರಲು ಸಾಧ್ಯವೇ? ಈಗಿರುವ ಧರ್ಮಗಳೆಲ್ಲಾ ಸಹಸ್ರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದವುಗಳು. ಅದೂ ಅಲ್ಲದೆ ನಮ್ಮಲ್ಲಿ ಆಗಲೇ ಹಲವಾರು ಧರ್ಮಗಳಿವೆ. ಹೊಸ ಧರ್ಮಗಳ ಅಗತ್ಯವಾದರೂ ಏನು?

ದೇಶದಲ್ಲಿ ಪ್ರಜಾಪ್ರಭುತ್ವವಿದೆ. ಸರ್ವರೂ ಅನುಸರಿಸಬೇಕಾದ ಸಂವಿಧಾನವಿದೆ. ದೇಶದಲ್ಲಿ ಚುನಾಯಿತ ಸರ್ಕಾರಗಳಿವೆ. ದೇಶದ ಅಭಿವೃದ್ಧಿ, ಪ್ರಗತಿಗಾಗಿ ಮಾಡಲು ಬಹಳಷ್ಟು ಕೆಲಸಗಳಿವೆ. ಆದ್ದರಿಂದ ಹೊಸ ಧರ್ಮ ಸ್ಥಾಪನೆಗೆ ಅವಕಾಶವೇ ಇಲ್ಲ. ಇನ್ನು ಲಿಂಗಾಯತ ಸಂಪ್ರದಾಯ ಹಿಂದೂ ಧರ್ಮದ ಮುಂದುವರಿದ ಭಾಗವೇ ಆಗಿರುತ್ತದೆ. ಬಸವಣ್ಣನವರು, ಹಿಂದೂ ಧರ್ಮದಲ್ಲಿನ ಅನಿಷ್ಟ ಪದ್ಧತಿಗಳನ್ನು ವಿರೋಧಿಸಿದ್ದರು ಆದರೆ ಅದನ್ನು ತ್ಯಜಿಸಿರಲಿಲ್ಲ. ಬದಲಿಗೆ ಹಿಂದು ಧರ್ಮದಲ್ಲಿದ್ದುಕೊಂಡೇ ಸಮಾನತೆ, ಏಕತೆ, ಮೌಢ್ಯ ನಿವಾರಣೆಗೆ ಶ್ರಮಿಸಿದರು. ಲಿಂಗಾಯತರು ಕಟ್ಟಿಕೊಳ್ಳುವ ಇಷ್ಟಲಿಂಗ, ಪೂಜಿಸುವ ಏಕದೇವ ಶಿವ (ಅದು ಲಿಂಗಾಕಾರ, ನಿರಾಕಾರ, ಓಂಕಾರ ಹೀಗೆ ಯಾವುದೇ ರೂಪದಲ್ಲಿರಲಿ) ಹಾಗೂ ಧರಿಸುವ ವಿಭೂತಿ ಎಲ್ಲವೂ ಹಿಂದೂ ಧರ್ಮದ ಸಂಕೇತಗಳೇ ಆಗಿವೆ.

ಬಸವಣ್ಣನವರ ತತ್ವ ಸಿದ್ಧಾಂತಗಳು ಸಹ ಮೂಲ ಹಿಂದೂ ಧರ್ಮದಲ್ಲಿನ ತತ್ವ ಸಿದ್ಧಾಂತಗಳು ಹಾಗೂ ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿಯೇ ಇವೆ. ಲಿಂಗಾಯತರು ಹೇಳುವ ಪರಶಿವ, ಜಗದಗಲದ ಚೇತನ, ಎಲ್ಲವೂ ಹಿಂದೂ ಧರ್ಮದ ಆಧ್ಯಾತ್ಮಿಕ ಚಿಂತನೆಯ ಕಲ್ಪನೆಗಳೇ ಆಗಿವೆ. ಈ ಎಲ್ಲಾ ಕಾರಣಗಳಿಂದಾಗಿ ಸ್ವತಂತ್ರ ಲಿಂಗಾಯತ ಧರ್ಮ ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ. ಆದಾಗ್ಯೂ ಮುಖ್ಯಮಂತ್ರಿ ‘ಎಲ್ಲರೂ ಒಟ್ಟಾಗಿ ಬನ್ನಿ, ತೀರ್ಮಾನಿಸೋಣ’ ಎಂದು ಹೇಳುವುದರ ಮೂಲಕ ಲಿಂಗಾಯತ ಮುಖಂಡರಲ್ಲಿ ಆಶಾಭಾವನೆ ಮೂಡಿಸುವುದರ ಹಿಂದೆ ರಾಜಕೀಯ ಉದ್ದೇಶವಲ್ಲದೆ ಬೇರಿನ್ನೇನು ಇರಲು ಸಾಧ್ಯ?

ADVERTISEMENT

–ಎಸ್. ಚಂದ್ರಶೇಖರ್ ಸೋಮಯಾಜಿ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.