ADVERTISEMENT

ಸನ್ಮಾನ– ಅಪಾಯ

ಎಂ.ಸಿ.ಷಿರಾಜ್‌, ಮೈಸೂರು
Published 5 ಫೆಬ್ರುವರಿ 2016, 19:30 IST
Last Updated 5 ಫೆಬ್ರುವರಿ 2016, 19:30 IST

ನಾನು ನಿವೃತ್ತ ಕನ್ನಡ ಉಪಾಧ್ಯಾಯ. ಸಮಾಜವನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಖಯಾಲಿ ಇದೆ. ಇತ್ತೀಚೆಗೆ ಕೆಲವು ಚಟುವಟಿಕೆಗಳ ಕಡೆ ನಿಗಾ ಕೊಟ್ಟಿದ್ದು, ಸಾಮಾಜಿಕ ಕೆಡುಕು ಗಮನಕ್ಕೆ ಬರುತ್ತಿದೆ. ಮಂತ್ರಿ, ಶಾಸಕ, ಸಾಧಕ ಮುಂತಾದವರಿಗೆ ಸನ್ಮಾನ ಮಾಡಿದುದನ್ನು ಕಾಣುತ್ತಿದ್ದೆ. ಇತ್ತೀಚೆಗೆ, ವರ್ಗವಾಗಿ ಬಂದ ಕೆಲವು ಇಲಾಖೆಗಳ ಅಧಿಕಾರಿಗಳನ್ನು ಸನ್ಮಾನಿಸುವುದನ್ನು ಕಾಣುತ್ತಿದ್ದೇವೆ. ಅದಕ್ಕಾಗಿಯೇ ಹುಟ್ಟಿಕೊಂಡಿರುವ ಸಂಘ, ಸಮಿತಿಗಳ ಉದ್ದೇಶ ಅನುಮಾನ ಹುಟ್ಟಿಸುತ್ತದೆ.

ಪೊಲೀಸ್‌ ಅಧಿಕಾರಿಗಳನ್ನು, ವಾಣಿಜ್ಯ ತೆರಿಗೆ ಅಧಿಕಾರಿಗಳನ್ನು, ಕಂದಾಯ ಇಲಾಖೆ ಅಧಿಕಾರಿಗಳನ್ನು, ಅದರಲ್ಲಿಯೂ ಅವರ ಹುದ್ದೆಗಳ ಮಹತ್ವವನ್ನು ಮೂಸಿ ನೋಡಿ ಸನ್ಮಾನಿಸುವ, ಅದಕ್ಕಾಗಿಯೇ  ಹುಟ್ಟಿಕೊಂಡಂತೆ ಕಾಣುವ ಸಮಿತಿಗಳು, ಬೇಟೆಗಾರರಂತೆ ಹೊಂಚಿ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಳ್ಳುವ ಹುನ್ನಾರದಿಂದ ಸನ್ಮಾನ ಮಾಡಲು ಮುಗಿಬೀಳುತ್ತವೆ. 

ಸನ್ಮಾನಕ್ಕೆ ಒಪ್ಪಿಕೊಂಡ ಮಿಕವು ಬಲೆಗೆ ಬೀಳುತ್ತದೆ. ಸಮಿತಿಯವರು ಅವರನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸುತ್ತಾರೆ. ಅಧಿಕಾರಿ ಮುಂದೆ ಸತ್ಯನಿಷ್ಠುರನಾಗಿ ನಡೆದುಕೊಳ್ಳಲು ಹಂಗು ಅಡ್ಡಬರುತ್ತದೆ. ಆದ್ದರಿಂದ ಆಯಕಟ್ಟಿನ ಹುದ್ದೆಗಳಿಗೆ ವರ್ಗವಾಗಿ ಬರುವವರು ಸನ್ಮಾನಕ್ಕೆ ಒಪ್ಪಿಕೊಳ್ಳದಿರುವುದು ಒಳ್ಳೆಯದು. ವರ್ಗಾವಣೆ, ರಾಜಕೀಯ ಕುಟಿಲತೆಗಳಿಂದ ತಪ್ಪಿಸಿಕೊಳ್ಳಲು ಸತ್ಯ, ಕರ್ತವ್ಯಗಳನ್ನು ಗಾಳಿಗೆ ತೂರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.