ADVERTISEMENT

ಸರ್ವಂ ಇಂದಿರಾ ಮಯಂ!

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2017, 19:30 IST
Last Updated 22 ಆಗಸ್ಟ್ 2017, 19:30 IST

ಕೊನೆಗೂ ಇಂದಿರಾ ಕ್ಯಾಂಟೀನ್‌ ಪ್ರಾರಂಭವಾಗಿದೆ, ಇಂದಿರಾ ಗಾಂಧಿಯವರಿಗೂ ಈ ಕ್ಯಾಂಟೀನ್‌ಗೂ ಏನು ಸಂಬಂಧವೋ ತಿಳಿಯದು. ಮೈಸೂರಿನಲ್ಲಿ ‘ನಳಪಾಕ’ ಎಂಬ ಹೆಸರಿನ ಹೋಟೆಲುಗಳ ಸಮೂಹವಿದೆ. ಈ ಹೋಟೆಲುಗಳಿಗೆ ‘ನಳಪಾಕ’ ಅಂತ ಹೆಸರಿಟ್ಟಿರುವುದರಲ್ಲಿ ಒಂದು ಅರ್ಥವಿದೆ. ನಳಮಹಾರಾಜ ಒಬ್ಬ ಅತ್ಯುತ್ತಮ ಬಾಣಸಿಗನಂತೆ. ಹಾಗಾಗಿ ಈ ಹೋಟೆಲುಗಳಿಗೆ ‘ನಳಪಾಕ’ ಎಂಬ ಹೆಸರು ಅತ್ಯಂತ ಸೂಕ್ತ. ಭೀಮಸೇನನೂ ಒಬ್ಬ ಅತ್ಯುತ್ತಮ ಪಾಕ ಪ್ರವೀಣನೇ. ಅವನ ಹೆಸರನ್ನಾದರೂ ಇಂದಿರಾ ಕ್ಯಾಂಟೀನ್‌ಗೆ ಇಡಬಹುದಿತ್ತು.

ಶೃಂಗೇರಿಯಲ್ಲಿ ಇಂಥದೇ ಒಂದು ಯಡವಟ್ಟು ಮಾಡಲಾಗಿದೆ. ಒಂದು ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ‘ರಾಜೀವ್‌ ಗಾಂಧಿ ಸಂಸ್ಕೃತ ವಿಶ್ವವಿದ್ಯಾಲಯ’ ಅಂತ ನಾಮಕರಣ ಮಾಡಲಾಗಿದೆ! ರಾಜೀವ್‌ ಗಾಂಧಿಯವರಿಗೂ ಸಂಸ್ಕೃತಕ್ಕೂ ಏನು ಸಂಬಂಧ? ಅವರೇನು ಸಂಸ್ಕೃತದ ಪ್ರಕಾಂಡ ಪಂಡಿತರೇ? ಕಾಳಿದಾಸ, ಭವಭೂತಿ, ಬಾಣ, ಪಾಣಿನಿ– ಇಂತಹ ಸಂಸ್ಕೃತದ ಉದ್ದಾಮ ಸಾಹಿತಿಗಳು, ಹೀಗೆ ಹೆಸರಿಟ್ಟವರ ಕಣ್ಣಿಗೆ ಬಿದ್ದಿಲ್ಲದುದು ಆಶ್ಚರ್ಯ. ಶೃಂಗೇರಿಯ ಈ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಆದಿಶಂಕರಾಚಾರ್ಯರಿಗಿಂತ ಸೂಕ್ತ ಹೆಸರು ಇನ್ನೊಂದು ಇದೆಯೇ?

ಕ್ಯಾಂಟೀನ್‌ಗಳಿಗೆ ಇಂದಿರಾ ಹೆಸರಿಟ್ಟಿದ್ದು ಸಾಲದು ಅಂತ ಹೊಸ ವಸತಿ ಶಾಲೆಗಳನ್ನು ಕಟ್ಟಿಸಿ ಅವುಗಳಿಗೂ ಇಂದಿರಾ ಹೆಸರಿಡುತ್ತಾರಂತೆ! ‘ಇಂದಿರಾ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಇಂದಿರಾ' ಎಂದ ಹೊಗಳುಭಟರು ಕಾಂಗ್ರೆಸ್‌ನಲ್ಲಿದ್ದರು. ಕಾಂಗ್ರೆಸ್ಸೇ ನಿರಂತರವಾಗಿ ಆಳುವ ಸಂದರ್ಭ ಬಂದಲ್ಲಿ ಅವರು ನಮ್ಮೀ ಹಿಂದುಸ್ತಾನಕ್ಕೆ ಇಂದಿರಾಸ್ಥಾನ ಎಂದೋ ರಾಜೀವಸ್ಥಾನ ಎಂದೋ ಮರುನಾಮ ಕರಣ ಮಾಡಲು ಮುಂದಾದರೂ ಆಶ್ಚರ್ಯವಿಲ್ಲ!

ADVERTISEMENT

ನಾನು ಕಾಂಗ್ರೆಸ್ಸಿಗರಲ್ಲಿ ಕೇಳಿಕೊಳ್ಳುವುದು ಇಷ್ಟೇ: ನಿಮ್ಮ ನಿಮ್ಮ ಕುಟುಂಬಗಳಲ್ಲಿ ಹುಟ್ಟುವ ಹೆಣ್ಣುಮಕ್ಕಳಿಗೆಲ್ಲ ಇಂದಿರಾ ಗಾಂಧಿ ಅಂತಲೂ, ಗಂಡುಮಕ್ಕಳಿಗೆಲ್ಲಾ ರಾಜೀವ್‌ ಗಾಂಧಿ, ರಾಹುಲ್‌ ಗಾಂಧಿ ಅಂತಲೂ ಬೇಕಿದ್ದರೆ ಹೆಸರಿಟ್ಟುಕೊಳ್ಳಿ. ನೀವು ಕಟ್ಟಿಸುವ ನಿಮ್ಮ ಮನೆಗಳಿಗೆ ಇಂದಿರಾ ನಿವಾಸ, ರಾಜೀವ್‌ ನಿವಾಸ ಅಂತ ಹೆಸರಿಟ್ಟುಕೊಳ್ಳಿ, ಆದರೆ, ಸಾರ್ವಜನಿಕರ ಹಣದಿಂದ ನಡೆಸುವ ಸಂಸ್ಥೆಗಳಿಗೆಲ್ಲಾ ಇಂದಿರಾ, ರಾಜೀವ್‌ ಅಂತ ಹೆಸರಿಟ್ಟು ಏಕೆ ಕಿರಿಕಿರಿ ಮಾಡುತ್ತೀರಿ? ದೇಶದ ಖಜಾನೆಗೆ ತೆರಿಗೆ ತುಂಬುವವರು ಕೇವಲ ಕಾಂಗ್ರೆಸ್‌ ಮಂದಿ ಮಾತ್ರವೇನು?

ಜಿ.ವಿ. ಗಣೇಶಯ್ಯ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.