ADVERTISEMENT

ಸಶಕ್ತ ಸಂಕೇತ

ಬಿ.ಲಕ್ಕಣ್ಣ, ಬೆಂಗಳೂರು
Published 26 ಜೂನ್ 2016, 19:30 IST
Last Updated 26 ಜೂನ್ 2016, 19:30 IST

ಎರಡನೇ ವಿಶ್ವ ಸಮರದಲ್ಲಿ ತನ್ನ ಶತ್ರು ರಾಷ್ಟ್ರ ರಷ್ಯಾ, ಜಪಾನ್‌ ದೇಶವನ್ನು ಆಕ್ರಮಿಸಿಕೊಂಡು, ಮುಂದೆ ಪ್ರಬಲ ರಾಷ್ಟ್ರವಾಗಿ ರೂಪುಗೊಳ್ಳುತ್ತದೆ ಎಂಬುದನ್ನು ಸಹಿಸಲಾಗದ ಅಮೆರಿಕ, ಜಪಾನ್‌ ದೇಶವನ್ನೇ ನಾಶಗೊಳಿಸುವ ನಿರ್ಧಾರ ಕೈಗೊಂಡಿತು. ಇದರಿಂದಾಗಿ ಎರಡು ಪ್ರಬಲ ರಾಷ್ಟ್ರಗಳ ತಿಕ್ಕಾಟಕ್ಕೆ 3ನೇ ರಾಷ್ಟ್ರ ಜಪಾನ್‌ ಬಲಿಯಾದುದು ಕಾಲಗರ್ಭದೊಳಗಿನ ವಿಪರ್ಯಾಸ. 

ತತ್ಫಲವಾಗಿ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಮೆರಿಕ ವಿಶ್ವದ ಮೊಟ್ಟಮೊದಲ ಅಣುಬಾಂಬ್‌ ದಾಳಿ  ನಡೆಸಿತು. ‘ಸರ್ವಂ ಕಾಲಾಯ ತಸ್ಮೈ ನಮಃ’ ಎಂಬಂತೆ ದುರಂತ ಸಂಭವಿಸಿ ಈಗ 70 ವರ್ಷಗಳೇ ಸಂದಿವೆ. ಎಲ್ಲ ಮೊನಚುಗಳನ್ನು ಮೊಂಡಾಗಿಸಿಕೊಳ್ಳುವ ಶಕ್ತಿ ಕಾಲಕ್ಕಿದೆ. 

ಆಗಿಹೋದ ಯಾವುದೇ ಘಟನೆಯನ್ನು ಬದಲಿಸಲಿಕ್ಕೆ ಸಾಧ್ಯವಿಲ್ಲವೆನ್ನುವುದು ಸತ್ಯವಾದರೂ ಅದನ್ನು ನೋಡುವ ದೃಷ್ಟಿಕೋನವನ್ನು ಬದಲಿಸಿಕೊಳ್ಳಲು ಸಾಧ್ಯವಿದೆಯಾದ್ದರಿಂದ ಈ ಧೋರಣೆಯಲ್ಲಿ ನಾವಿಂದು ಮುಂದುವರೆಯಬೇಕಿದೆ. ಅದರಂತೆ  ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಅವರ ಹಿರೋಶಿಮಾ ಭೇಟಿಯನ್ನು ವಿಶ್ವದ ಪ್ರಜ್ಞಾವಂತ ನಾಗರಿಕರೆಲ್ಲರೂ ಮುಕ್ತವಾಗಿ ಸ್ವಾಗತಿಸಿದರು.

ಘಟನೆ ನಡೆದ 70 ವರ್ಷಗಳಲ್ಲಿ ಅಮೆರಿಕದ ಯಾವ ಅಧ್ಯಕ್ಷರೂ ಭೇಟಿಯಾಗದ ಶೂನ್ಯವನ್ನು ಒಬಾಮ ಅಳಿಸಿದ್ದಾರೆಂಬುದು ಚರಿತ್ರಾರ್ಹ. ಇದೊಂದು ಮಾನವೀಯ ತುಡಿತ ಹೊಂದಿದ ವಿಶ್ವದ ಜನರ ಒಡಲಾಳದೊಳಗಿನ ಅತೃಪ್ತತೆಯ ತಪ್ತತೆಯಲ್ಲಿನ ಆಶಾಕಿರಣವಾಗಿದೆ.

ನನ್ನ ಸಾಮಾನ್ಯ ಬೌದ್ಧಿಕ ಹಿನ್ನೆಲೆಯ ಅವಲೋಕನದಲ್ಲಿ ಒಬಾಮ ಅವರು, ಅಣುಬಾಂಬ್‌ ದಾಳಿ ಬಗ್ಗೆ ಅಮೆರಿಕದ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್‌ ಅವರ ನಿರ್ಧಾರದ ಕುರಿತು ಹಾಗೂ ವಿಶ್ವದಲ್ಲಿಯೇ  ಮೊದಲ ಬಾರಿಗೆ ಅಣುಬಾಂಬ್‌ ಸ್ಫೋಟಿಸಿದ ಕಹಿ ಬಗ್ಗೆ ಕ್ಷಮೆ ಯಾಚಿಸಬಹುದೆಂಬ ನಿರೀಕ್ಷೆ ಹುಸಿಯಾಯಿತು.

ಆದರೆ ನನ್ನ ಹುಸಿಯಾದ ನಿರೀಕ್ಷೆಗೆ ಸಮಾಧಾನ ಕಾಣಿಸುವಂತೆ ಸಂಪಾದಕೀಯದಲ್ಲಿ (ಪ್ರ.ವಾ., ಮೇ 30) ಒಬಾಮ ಅವರು  ಟ್ರೂಮನ್ ನಿರ್ಧಾರದ  ಪುನರವಲೋಕನ ಮಾಡದಂತಹ ಮುತ್ಸದ್ದಿತನದ ನಿಲುವನ್ನು ಪ್ರಸ್ತಾಪಿಸಿದ್ದು ಮತ್ತೊಮ್ಮೆ ಈ ನಿಟ್ಟಿನಲ್ಲಿ ನನ್ನನ್ನು ಅವಲೋಕಿಸಿಕೊಳ್ಳುವುದಕ್ಕೆ ಸಹಕಾರಿಯಾಯಿತು. ವಿಶ್ವವನ್ನು ಅಣ್ವಸ್ತ್ರ ಮುಕ್ತಗೊಳಿಸುವ ದೃಷ್ಟಿಕೋನದ ಹೋರಾಟಕ್ಕೆ ಒಬಾಮ ಅವರ ಭೇಟಿ ಸಶಕ್ತ ಸಂಕೇತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.